ನ್ಯೂಸ್

ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಸಚಿವ ದಿನೇಶ್​ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ. ನಿಮ್ಮ ಈ ಮನೆಮುರಕುತನಕ್ಕೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ. ಆದರೂ ನಿಮಗೆ ಬುದ್ದಿ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಬಿಜೆಪಿ ರಾಜ್ಯಾಧ್ಯಕ್ಷರ​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಕ್ಕಿ ಪೂರೈಕೆ ಸಂಬಂಧ ಕೇಂದ್ರಕ್ಕೆ ಕರ್ನಾಟಕವಷ್ಟೇ ಮುಖ್ಯವಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರವು ಎಲ್ಲವನ್ನೂ ಕರ್ನಾಟಕಕ್ಕೆ ಕೊಡಲಿ ಎಂಬ ಸ್ವಾರ್ಥವು ನಮ್ಮಲಿಲ್ಲ. ಗೋದಾಮುಗಳಲ್ಲಿ ಅಕ್ಕಿಯನ್ನು ಕೊಳೆಯಿಸುವ ಬದಲು ಅದನ್ನು ಬಡವರಿಗೆ ಕೊಡಿ. ಅದನ್ನು ನಾವು ಮಾರುಕಟ್ಟೆ ದರದಲ್ಲಿ ಖರೀದಿಸಲು ಸಿದ್ಧರಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರದಲ್ಲಿರುವ ನಿಮ್ಮ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಒಂದೆರಡಲ್ಲ. ಜಿಎಸ್​ಟಿ ಬಾಕಿ, ನೆರೆ ಬಂದಾಗ, ಬರ ಬಿದ್ದಾಗ ಮತ್ತು ಜಿಎಸ್​ಟಿಯ ಪರಿಹಾರ ವಿಚಾರದಲ್ಲೂ ಕೇಂದ್ರವು ಮೋಸ ಮಾಡಿದೆ. ಅಲ್ಲದೇ, ಯೋಜನೆ ಅನುಷ್ಠಾನದಲ್ಲೂ ಕೇಂದ್ರವು ರಾಜ್ಯಕ್ಕೆ ಮೋಸವನ್ನು ಮಾಡಿದ್ದು, ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕುರಿತಾಗಿ ಒಂದು ಪುಸ್ತಕವೇ ಬರೆಯಬಹುದು ಎಂದು ಹೇಳಿದ್ದಾರೆ.

ನೀವು ಈ ರಾಜ್ಯದ ಮನೆ ಮಗನಾಗಿ ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಗೆ ಹೆಗಲು ಕೊಡಬೇಕು. ರಾಜ್ಯದ ಬಡವರಿಗೆ ಅಕ್ಕಿ ಕೊಡದೇ ದ್ವೇಷದ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂಬದನ್ನು ಕೇಂದ್ರ ನಾಯಕರಿಗೆ ತಿಳಿ ಹೇಳಬೇಕು. ಅದು ಬಿಟ್ಟು ಮೋದಿಯವರ ದ್ವೇಷದ ಬೆಂಕಿಗೆ ನೀವು ತುಪ್ಪ ಸುರಿಯುವ ಕೆಲಸ ಮಾಡಬೇಡಿ. ಬಡವರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ ಎಂದು ಸಚಿವರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)