ನ್ಯೂಸ್

ಸರ್ಕಾರಕ್ಕೆ ಕನಿಷ್ಠ ವೇತನ ಸಂಕಷ್ಟ: 32 ಸಾವಿರ ರೂ. ನಿಗದಿಗೆ ಕಾರ್ವಿುಕರ ಒತ್ತಡ

Webdesk - Ravikanth

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ವಿವಿಧ ಖಾಸಗಿ ವಲಯಗಳಲ್ಲಿನ ಕಾರ್ವಿುಕರ ಕನಿಷ್ಠ ವೇತನದ ವಿಚಾರದಲ್ಲಿ ರಾಜ್ಯ ಸರ್ಕಾರ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಒಂದೆಡೆ ಕಾರ್ವಿುಕರ ಒತ್ತಡ ಇದ್ದರೆ, ಇನ್ನೊಂದೆಡೆ ಉದ್ದಿಮೆದಾರರ ವಿರೋಧದಿಂದ ಸರ್ಕಾರ ಇಕ್ಕಟ್ಟಿನಲ್ಲಿದೆ. ಕರೊನಾ ಸಂಕಷ್ಟದಿಂದಾಗಿ ಒಂದು ವರ್ಷದ ಹಿಂದೆ ಆಗಬೇಕಾಗಿದ್ದ ಕನಿಷ್ಠ ವೇತನ ಪರಿಷ್ಕರಣೆ ಆಗಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗಬೇಕೆಂಬ ನಿಯಮ ಒಂದು ಅವಧಿಗೆ ಬ್ರೇಕ್ ಆಗಿದೆ. ಆದರೆ, ಹಣದುಬ್ಬರ ಹೆಚ್ಚಾಗಿ ಕಾರ್ವಿುಕರ ಬದುಕು ದುಸ್ತರ ವಾಗಿರುವುದರಿಂದ ಈಗ ಕನಿಷ್ಠ ವೇತನ ಪರಿಷ್ಕರಣೆ ಅನಿವಾರ್ಯವಾಗಿದೆ.

ರಾಜ್ಯ ಸರ್ಕಾರದ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಸಭೆ ಇತ್ತೀಚೆಗೆ ನಡೆದಿದ್ದು, ಕಾರ್ವಿುಕ ಸಂಘಟನೆಗಳು ಹಾಗೂ ಉದ್ಯಮ ಸಂಸ್ಥೆಗಳು ತಂತಮ್ಮ ಸಲಹೆಗಳನ್ನು ಸಭೆಯ ಮುಂದಿಟ್ಟಿವೆ. ಎರಡು ಕಡೆಯಿಂದಲೂ ವೈಜ್ಞಾನಿಕ ಅಧ್ಯಯನ ಮಾಡಿಯೇ ಪರಿಷ್ಕರಣೆಯ ಪ್ರಮಾಣದ ಬಗ್ಗೆ ವಿವರಿಸಿವೆ. ಮಂಡಳಿ ಈಗ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕಾಗಿದೆ.

ಈ ಸಭೆಯ ನಡಾವಳಿಯನ್ನು ಸರ್ಕಾರಕ್ಕೆ ಕಳುಹಿಸುವಾಗ ಕಾರ್ವಿುಕ ಸಂಘಟನೆಗಳು ವೈಜ್ಞಾನಿಕವಾಗಿ ನೀಡಿರುವ ಮಾಹಿತಿಯನ್ನು ಕಡ್ಡಾಯವಾಗಿ ಸೇರಿಸಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ. ಇದರಿಂದಾಗಿ ಇಲಾಖೆಗೆ ಒಂದು ರೀತಿಯಲ್ಲಿ ಸಂಕಷ್ಟ ಎದುರಾಗಿದೆ. ಸಭೆಯ ನಡಾವಳಿ ಸರ್ಕಾರಕ್ಕೆ ಹೋದ ನಂತರ ಆಕ್ಷೇಪಣೆಗಳನ್ನು ಕರೆದು ಅಂತಿಮ ಅಧಿಸೂಚನೆ ಪ್ರಕಟವಾಗಬೇಕಾಗುತ್ತದೆ. ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕನಿಷ್ಠ ವೇತನ ಪರಿಷ್ಕರಣೆ ಮತ್ತಷ್ಟು ತಡವಾಗಬಹುದು.

ಸರ್ಕಾರಕ್ಕೆ ಆತಂಕ ಏಕೆ?: ಕರೊನಾದಿಂದ ಉದ್ಯಮಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಿ ಒಂದು ವರ್ಷಕ್ಕೂ ಹೆಚ್ಚಿನ ಬಾಕಿ ಕೊಡುವುದು ಆರ್ಥಿಕವಾಗಿ ಉದ್ಯಮಗಳ ಮೇಲೆ ಹೊರೆ ಆಗುತ್ತದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಕೆಂಪುಹಾಸು ಹಾಕಿ ರಾಜ್ಯದ ಉದ್ದಿಮೆಗಳನ್ನು ಸೆಳೆಯಲು ಸಿದ್ಧವಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಕಾರ್ವಿುಕರು ಕೇಳಿದಷ್ಟು ಹೆಚ್ಚಳ ಮಾಡಿದರೆ ಉದ್ದಿಮೆಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತವೆ, ಮಾಡದಿದ್ದರೆ ಕಾರ್ವಿುಕರು ಕಾನೂನು ಹೋರಾಟ ಮಾಡುತ್ತಾರೆ. ಆದ್ದರಿಂದಲೇ ಸರ್ಕಾರದ ನಿರ್ಧಾರ ಕುತೂಹಲ ಮೂಡಿಸಿದೆ.

ಸರ್ಕಾರ ಯಾವುದೇ ನೆಪ ಹೇಳದೆ ಕನಿಷ್ಠ ವೇತನವನ್ನು 32 ಸಾವಿರ ರೂ.ಗೆ ನಿಗದಿ ಮಾಡಬೇಕು. ಇಂದಿನ ಬೆಲೆ ಏರಿಕೆಯಲ್ಲಿ ಕಾರ್ವಿುಕರು ಬದುಕುವುದೇ ಕಷ್ಟವಾಗಿದೆ. ಹಳೆಯ ಬಾಕಿಯನ್ನೂ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ. ಗಾರ್ವೆಂಟ್ಸ್ ಕಂಪನಿಗಳು ತುಟ್ಟಿಭತ್ಯೆಯನ್ನು ನೀಡಿರಲಿಲ್ಲ. ನ್ಯಾಯಾಲಯಕ್ಕೆ ಹೋಗಿ ಪಡೆದಿದ್ದೇವೆ. | ಎಲ್. ಕಾಳಪ್ಪ ಎಚ್​ಎಂಕೆಪಿ ಪ್ರಧಾನ ಕಾರ್ಯದರ್ಶಿ

ಸರ್ಕಾರದಿಂದ ಉದ್ದೇಶಿತ ಹೆಚ್ಚಳ: ಸರ್ಕಾರ ಎರಡರಿಂದ ಮೂರು ಸಾವಿರ ರೂ.ಗಳಷ್ಟು ವೇತನ ಹೆಚ್ಚಳಕ್ಕೆ ಕರಡು ಸಿದ್ಧಪಡಿಸಿತ್ತು. ಉದಾಹರಣೆಗೆ ಸೆಕ್ಯೂರಿಟಿ ಏಜೆನ್ಸಿ ನೌಕರರಿಗೆ ಈಗ ನೀಡುವ 12 ಸಾವಿರ ರೂ.ಗಳನ್ನು 15,769 ರೂ.ಗಳಿಗೆ ಹೆಚ್ಚಿಸುವುದು ಕರಡು ಪ್ರತಿಯಲ್ಲಿತ್ತು. ಆದರೆ, ಇದನ್ನೊಪ್ಪದ ಕಾರ್ವಿುಕರು ತಮ್ಮದೇ ವಾದ ಮುಂದಿಟ್ಟಿದ್ದಾರೆ.

ವಾದ

  • ಹಣದುಬ್ಬರ ಶೇ.7.8ರಷ್ಟು ಇದ್ದು ಬೆಲೆಗಳೆಲ್ಲ ಹೆಚ್ಚಾಗಿ ಜೀವನ ದುಸ್ತರ
  • ಕೋವಿಡ್​ನಿಂದ ಈಗ ಉದ್ದಿಮೆಗಳು ಚೇತರಿಸಿಕೊಂಡಿವೆ
  • ವೇತನಕ್ಕೆ ಗಂಡ-ಹೆಂಡತಿಯನ್ನು ಮಾತ್ರ ಪರಿಗಣಿಸದೇ ಪಾಲಕರನ್ನು ಸೇರಿಸಿ ಲೆಕ್ಕ ಹಾಕಿ
  • ಕನಿಷ್ಠ 3 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಿ
  • ಕಾಲಕಾಲಕ್ಕೆ ತುಟ್ಟಿಭತ್ಯೆ ಕೊಡುವಂತೆ ನೋಡಿಕೊಳ್ಳಿ

ಪ್ರತಿವಾದ

  • ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ
  • ಉದ್ದಿಮೆಗಳನ್ನು ನಡೆಸುವುದೇ ಕಷ್ಟವಾಗಿದೆ
  • ವಿದ್ಯುತ್ ದರ ಏರಿಕೆಯಾಗಿ ಸಂಕಷ್ಟ
  • ಕರೊನಾದಲ್ಲಿಯೂ ವೇತನ ನೀಡಿದ್ದೇವೆ
  • ಪರಿಷ್ಕರಣೆ 5 ವರ್ಷಕ್ಕೊಮ್ಮೆಯೇ ಇರಲಿ
ಮಂಡಳಿ ಸಭೆಯ ನಡಾವಳಿ ಇನ್ನಷ್ಟೇ ಬರಬೇಕಾಗಿದೆ. ಕಾರ್ವಿುಕರು ಮತ್ತು ಉದ್ದಿಮೆದಾರರ ಹಿತ ಗಮನದಲ್ಲಿಟ್ಟುಕೊಂಡು ನ್ಯಾಯಸಮ್ಮತ ನಿರ್ಧಾರ ಮಾಡುತ್ತೇವೆ. ನೆರೆಯ ರಾಜ್ಯಗಳಲ್ಲಿ ಕನಿಷ್ಠ ವೇತನ ಎಷ್ಟಿದೆ ಎಂಬುದರ ವರದಿ ತರಿಸುತ್ತೇವೆ. ಕಳೆದ ಬಾರಿ ಎಷ್ಟು ಏರಿಕೆ ಮಾಡಲಾಗಿದೆ ಎಂಬುದನ್ನು ಸಹ ಪರಿಶೀಲನೆ ಮಾಡಿ ನಿರ್ಧರಿಸುತ್ತೇವೆ. | ಅರಬೈಲ್ ಶಿವರಾಮ ಹೆಬ್ಬಾರ್ ಕಾರ್ವಿುಕ ಸಚಿವ

ಎಷ್ಟು ಏರಿಕೆಗೆ ಒತ್ತಡ?: ಈಗ ಕನಿಷ್ಠ ವೇತನ 12 ರಿಂದ 16 ಸಾವಿರ ರೂ.ಗಳ ತನಕ ಇದೆ. ಇದನ್ನು ಕನಿಷ್ಠ 32 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕು. 2021ರ ಏಪ್ರಿಲ್​ನಿಂದಲೇ ಅನ್ವಯಿಸಬೇಕೆಂಬುದು ಕಾರ್ವಿುಕ ಸಂಘಟನೆಗಳ ವಾದವಾಗಿದೆ. ಆದರೆ, ಉದ್ಯಮ ಸಂಸ್ಥೆಗಳು 22 ರಿಂದ 24 ಸಾವಿರ ರೂ.ಗಳನ್ನು ನೀಡಲು ಸಾಧ್ಯ ಎಂದು ಪ್ರತಿವಾದ ಮಂಡಿಸಿವೆ ಎಂದು ಗೊತ್ತಾಗಿದೆ. ಒಟ್ಟು 32 ರೀತಿಯ ಉದ್ಯೋಗಗಳನ್ನು ಗುರುತಿಸಲಾಗಿದೆ. ಅಂತೆಯೇ, ಅಷ್ಟೇ ರೀತಿಯ ಕನಿಷ್ಠ ವೇತನಗಳಿವೆ. ಸಮಿತಿ ಈಗ 9 ಉದ್ಯೋಗಗಳ ವೇತನ ಪರಿಷ್ಕರಣೆಯ ಬಗ್ಗೆ ಮಾತ್ರ ಚರ್ಚೆ ನಡೆಸಿದೆ. ಬಹುತೇಕ ಕನಿಷ್ಠ ವೇತನ ಒಂದೇ ಪ್ರಮಾಣದಲ್ಲಿದೆ. ಕುಟುಂಬವೊಂದು ಸರಳ ಜೀವನ ನಡೆಸಲು ತಿಂಗಳಿಗೆ 31,566 ರೂ.ಗಳ ಅಗತ್ಯವಿದೆ ಎಂಬುದನ್ನು ಅಧ್ಯಯನ ಮಾಡಿ ಸಂಘಟನೆಗಳು ವರದಿ ನೀಡಿವೆ.