ಬಿಹಾರದಲ್ಲಿ ಅಪಘಾತಕ್ಕೀಡಾದ ಮದ್ಯದ ಮಿನಿ ಟ್ರಕ್​ 
ನ್ಯೂಸ್

ಬಿಹಾರದಲ್ಲಿ ಪಲ್ಟಿಯಾದ ಮದ್ಯದ ಮಿನಿ ಟ್ರಕ್; ಎಣ್ಣೆ ಬಾಟಲಿ ಕಂಡು ಮುಗಿಬಿದ್ದ ಜನ! | Liquor Truck Accident

ಬಿಹಾರದ ಅರಾರಿಯಾದಲ್ಲಿ ಮದ್ಯ ತುಂಬಿದ್ದ ಮಿನಿ ಟ್ರಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಟ್ರಕ್‌ನಿಂದ ಬಿದ್ದ ಮದ್ಯದ ಬಾಟಲಿಗಳನ್ನು ನೂರಾರು ಮಂದಿ ಹೊತ್ತೊಯ್ದಿದ್ದು, ವಿಡಿಯೋ ವೈರಲ್ ಆಗಿದೆ.

Bihar Liquor Truck: ಮದ್ಯ ಮಾರಾಟ ಮತ್ತು ಸೇವನೆಗೆ ನಿಷೇಧವಿರುವ ಬಿಹಾರದಲ್ಲಿ ಮದ್ಯ ತುಂಬಿದ್ದ ಮಿನಿ ಟ್ರಕ್ ಅಪಘಾತಕ್ಕೀಡಾಗಿದೆ. ಟ್ರಕ್ ಪಲ್ಟಿಯಾದ ಬಳಿಕ ರಸ್ತೆಗೆ ಬಿದ್ದಿದ್ದ ಮದ್ಯದ ಬಾಟಲಿ ಹಾಗೂ ಕಾರ್ಟನ್‌ಗಳನ್ನು ಸ್ಥಳೀಯರು ಹೊತ್ತೊಯ್ದಿದ್ದಾರೆ.

ಅರಾರಿಯಾ ಜಿಲ್ಲೆಯ ರಾಣಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಖರಹತ್ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ವಿದೇಶಿ ಮದ್ಯ ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದ ಮಿನಿ ಟ್ರಕ್ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಮತ್ತು ಕ್ಲೀನರ್ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಟ್ರಕ್‌ನಲ್ಲಿ ಮದ್ಯದ ಬಾಟಲಿಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಮುಗಿಬಿದ್ದಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ನೂರಾರು ಮಂದಿ ರಸ್ತೆಗೆ ಬಿದ್ದಿದ್ದ ಮದ್ಯದ ಬಾಟಲಿ ಮತ್ತು ಕಾರ್ಟನ್‌ಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಈ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಷಯ ಗೊತ್ತಾಗುತ್ತಿದ್ದಂತೆ ರಾಣಿಗಂಜ್ ಪೊಲೀಸರು ಸ್ಥಳಕ್ಕೆ ಬಂದು ಮದ್ಯ ತುಂಬಿದ್ದ ಟ್ರಕ್‌ನ್ನು ವಶಕ್ಕೆ ಪಡೆದಿದ್ದಾರೆ. ಮದ್ಯದ ಬಾಟಲಿ ಹೊತ್ತೊಯ್ಯುತ್ತಿರುವ ದೃಶ್ಯಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಪಿಒ ಸುಶೀಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬಳಿ ‘ಸರ್, ನನಗೆ ಐಫೋನ್ ಬೇಕು’ ಎಂದ ಭೂಪ; ಹಿಮಂತ ಶರ್ಮಾ ಕೊಟ್ಟ ರಿಯಾಕ್ಷನ್ ವೈರಲ್! | Assam CM viral video

ಅಷ್ಟೇ ಅಲ್ಲ, ಈ ಮದ್ಯ ಎಲ್ಲಿಂದ ಬಂದಿತ್ತು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಅನ್ನೋದನ್ನೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿರುವ ನಡುವೆಯೇ ಇಷ್ಟು ಪ್ರಮಾಣದ ಮದ್ಯ ಸಾಗಾಟವಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. (ಏಜೆನ್ಸೀಸ್)