ನ್ಯೂಸ್

ಕೊರೊನಾ ಪೀಡಿತ ಇರಾನ್​ನಿಂದ ಭಾರತಕ್ಕೆ ಬಂದಿಳಿದ 58 ಸ್ವದೇಶಿಗರು

ಗಾಜಿಯಾಬಾದ್​: ಚೀನಾದಲ್ಲಿ ಕೊರೊನಾ ವೈರಸ್​ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ರಾಯಭಾರಿ ಕಚೇರಿ ಚೀನಾದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಾಸು ಕರೆತಂದಿತ್ತು. ಇದೀಗ ಇರಾನ್​ನಲ್ಲಿಯೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇರಾನ್​ನಲ್ಲಿದ್ದ 58 ಭಾರತೀಯರನ್ನು ಇಂದು ಸ್ವದೇಶಕ್ಕೆ ಕರೆತರಲಾಗಿದೆ.

ಇರಾನ್​ನಲ್ಲಿ ಇದುವರೆಗೂ ಸುಮಾರು 7,000 ಜನರಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ. 237 ಜನರು ಮೃತರಾಗಿದ್ದಾರೆ. 2,000ಕ್ಕೂ ಹೆಚ್ಚು ಭಾರತೀಯರು ಇರಾನ್​ನಲ್ಲಿ ವಾಸವಿದ್ದು ಅವರನ್ನೆಲ್ಲ ಸ್ವದೇಶದಕ್ಕೆ ಕರೆತರುವ ವ್ಯವಸ್ಥೆಯನ್ನು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಾಡುತ್ತಿದೆ. ಅದರ ಮೊದಲ ಹಂತವಾಗಿ ನಿನ್ನೆ (ಮಾ.9) ಇಂಡಿಯನ್​ ಏರ್​ಫೋರ್ಸ್​ನ C-17 ಏರ್​ಕ್ರಾಫ್ಟ್​ನನ್ನು ಭಾರತದಿಂದ ಇರಾನ್​ಗೆ ಕಳುಹಿಸಲಾಗಿತ್ತು. ಅಲ್ಲಿಂದ 58 ಭಾರತೀಯರನ್ನು ಹೊತ್ತು ತಂದಿರುವ ಏರ್​ಕ್ರಾಫ್ಟ್​ ಇಂದು ಬೆಳಗ್ಗೆ ಗಾಜಿಯಾಬಾದ್​ನಲ್ಲಿರುವ ಹಿಂಡನ್​ ವಾಯುನೆಲೆಯಲ್ಲಿ ಭೂಸ್ಪರ್ಶ ಮಾಡಿದೆ.

ಭಾರತಕ್ಕೆ ಬಂದಿಳಿದಿರುವ ಭಾರತೀಯರನ್ನು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಇರಿಸಲಾಗಿದೆ. ಈ ವಿಚಾರವಾಗಿ ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವರಾದ ಎಸ್​.ಜೈಶಂಕರ್​, "58 ಭಾರತೀಯರನ್ನು ಹೊತ್ತಿದ್ದ C-17 ವಿಮಾನವು ಇರಾನ್​ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಭಾರತೀಯ ರಾಯಭಾರಿ, ಭಾರತೀಯ ವೈದ್ಯಕೀಯ ತಂಡ ಮತ್ತು ಇಂಡಿಯನ್​ ಏರ್​ಫೋರ್ಸ್​ನ ಸಹಾಯಕ್ಕೆ ಧನ್ಯವಾದಗಳು. ಸಹಕಾರ ತೋರಿದ ಇರಾನ್​ನ ಆಡಳಿತಕ್ಕೆ ಧನ್ಯವಾದಗಳು. ಇನ್ನುಳಿದಿರುವ ಭಾರತೀಯರನ್ನು ಕರೆತರಲು ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)