ಅಗರ್ತಲಾ: ತ್ರಿಪುರಾದಾ ಮಾಜಿ ಮುಖ್ಯಮಂತ್ರಿ, ಸಿಪಿಐ(ಎಂ) ನಾಯಕ ಮಾಣಿಕ್ ಸರ್ಕಾರ್ ರಾಜಕೀಯದ ಹೊಸ ವರಸೆಯನ್ನು ಶುರುಮಾಡಿಕೊಂಡಿದ್ದಾರೆ. ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಅವರು ಈಗ ತ್ರಿಪುರಾದಲ್ಲಿ ಬಂಡುಕೋರರು ಮರುಸಂಘಟಿತರಾಗುತ್ತಿದ್ದಾರೆ ಎನ್ನುತ್ತ ರಾಜಕೀಯದ ಮಾತುಗಳನ್ನಾಡಿದ್ದಾರೆ!
ತ್ರಿಪುರಾ ಟ್ರೈಬಲ್ ಏರಿಯಾಸ್ ಅಟೋನಾಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್(ಟಿಟಿಎಡಿಸಿ) ಚುನಾವಣೆ ಸಮೀಪದಲ್ಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಬಂಡುಕೋರರ ಮರುಸಂಘಟನೆಗೆ ಪ್ರಯತ್ನ ಶುರುವಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಈ ಬೆಳವಣಿಗೆ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಿಳಿಸಿದ್ದಾರೆ.
ಅವರು ಸಿಪಿಐ(ಎಂ)ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯದ ಬಗ್ಗೆ ಗಮನಸೆಳೆದರು. ಖೋವಾಯಿ ಜಿಲ್ಲೆ, ಪಶ್ಚಿಮ ತ್ರಿಪುರಾದ ಲೆಫುಂಗಾ, ಉತ್ತರ ತ್ರಿಪುರಾದ ಪಣಿಸಾಗರ ಉಪವಲಯಗಳಲ್ಲಿ ಬಂಡುಕೋರರು ಮತ್ತೆ ಸಕ್ರಿಯರಾಗಿದ್ದಾರೆ. ಈ ಪ್ರದೇಶಗಳಲ್ಲಿ ಬಾಂಗ್ಲಾದೇಶದ ಗಡಿಭಾಗದಲ್ಲಿವೆ. ಅವರು ಮರುಸಂಘಟಿತರಾಗಿ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ. ಈ ಪ್ರಯತ್ನವನ್ನು ಕೂಡಲೇ ವಿಫಲಗೊಳಿಸಬೇಕು. ಸರ್ಕಾರ ಈ ಬತಗ್ಗೆ ಕೂಡ ಗಮನಹರಿಸಬೇಕು ಎಂದು ಮಾಣಿಕ್ ಸರ್ಕಾರ್ ಆಗ್ರಹಿಸಿದ್ದಾರೆ.
ನಮ್ಮ ಆಳ್ವಿಕೆಯ ಕಾಲದಲ್ಲಿ ಆಲ್ ತ್ರಿಪುರಾ ಟೈಗರ್ ಫೋರ್ಸ್(ಎಟಿಟಿಎಫ್) ಅನ್ನು ಸಿಂಪಲ್ಲಾಗಿ ನಿರ್ನಾಮ ಮಾಡಿದ್ದೆವು. ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನೆಲ್ಲ ಒಂದೋ ಬಾಂಗ್ಲಾದೇಶ ಸೆಕ್ಯುರಿಟಿ ಫೋರ್ಸ್ಗಳು ಅಥವಾ ಇತರೆ ಬಂಡುಕೋರರ ಗುಂಪು ವಶಪಡಿಸಿಕೊಂಡಿದ್ದವು. ಅದೇ ರೀತಿ ದ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ(ಎನ್ಎಲ್ಎಫ್ಟಿ) ಕೂಡ 20 ವರ್ಷಗಳ ಎಡರಂಗ ಆಳ್ವಿಕೆಯಲ್ಲಿ ಅಸ್ತಿತ್ವ ಕಳೆದುಕೊಂಡಿತ್ತು ಎಂದು ಸರ್ಕಾರ್ ತಮ್ಮ ಬೆನ್ನುತಟ್ಟಿಕೊಂಡಿದ್ದಾರೆ.
ಟ್ರೈಬಲ್ ಕೌನ್ಸಿಲ್ ಅನ್ನು ಮೇ 17ರಂದೇ ವಿಸರ್ಜಿಸಿದ್ದು, ಬಳಿಕ ಕೋವಿಡ್ ಕಾರಣಕ್ಕೆ ಕೌನ್ಸಿಲ್ನ ಅವಧಿಯನ್ನು ಮತ್ತೆ ವಿಸ್ತರಿಸುವ ಅವಕಾಶವನ್ನೂ ರಾಜ್ಯಪಾಲರು ನೀಡಿಲ್ಲ. ಟಿಟಿಎಡಿಸಿಯ ಎಕ್ಸಿಕ್ಯೂಟಿವ್ ಕಮಿಟಿಯೂ ಅಸ್ತಿತ್ವ ಕಳೆದುಕೊಂಡಿದ್ದು, ಹೊಸ ಕಮಿಟಿ ರಚನೆಯಾಗಿಲ್ಲ. ರಾಜ್ಯಪಾಲ ರಮೇಶ್ ಬಯಾಸ್ ಕೌನ್ಸಿಲ್ಗೆ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿದ್ದಾರೆ ಎಂಬುದು ಸರ್ಕಾರ್ ಆರೋಪ. (ಏಜೆನ್ಸೀಸ್)