ನ್ಯೂಸ್

ಊರಿಗೆ ಹೋಗುವ ಧಾವಂತ- ಅಪಘಾತಗಳಿಗೆ ಜೀವಕೊಟ್ಟ ವಲಸೆ ಕಾರ್ಮಿಕರು!

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ, ವಲಸೆ ಕಾರ್ಮಿಕರು ಇದ್ದ ಸ್ಥಳದಲ್ಲಿಯೇ ಇದ್ದ ಕಾರಣ, ಅನುಭವಿಸಿದ ಸಮಸ್ಯೆಗಳು ಹಲವಾರು. ಅವರಿಗೆ ಆಯಾ ರಾಜ್ಯ ಸರ್ಕಾರಗಳು ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದರೂ ಎಷ್ಟೋ ಮಂದಿಗೆ ಅವು ತಲುಪಿಲ್ಲ ಎನ್ನುವುದು ಸತ್ಯವೇ.

ಹಸಿವಿನಿಂದ ಬೇರೆಲ್ಲೋ ಸಾಯುವ ಬದಲು ತಮ್ಮೂರಿಗೇ ಹೋಗುವ ಎಂಬ ಧಾವಂತದಲ್ಲಿ ಲಾಕ್​ಡೌನ್​ ನಡುವೆಯೂ ಅದನ್ನು ಉಲ್ಲಂಘಿಸಿ ಊರಿನ ಹಾದಿ ಹಿಡಿದವರು ನೂರಾರು ಮಂದಿ. ಹೇಗಾದರೂ ತಮ್ಮೂರು ತಲುಪಿದರೆ ಸಾಕು ಎನ್ನುವ ಆತುರದಲ್ಲಿ 42 ಮಂದಿ ವಲಸೆ ಕಾರ್ಮಿಕರು ಅಪಘಾತಕ್ಕೆ ಒಳಗಾಗಿ ತಮ್ಮ ಜೀವ ಕಳೆದುಕೊಂಡಿದ್ದಾರೆ.

ಮಾರ್ಚ್‌ 25ರಿಂದ ಲಾಕ್‌ಡೌನ್‌ ಘೋಷಣೆಯಾದ ತಕ್ಷಣ ಕಾಲ್ನಡಿಗೆ, ಖಾಸಗಿ ವಾಹನಗಳಲ್ಲಿ ಊರಿಗೆ ತೆರಳುವ ಗಡಿಬಿಡಿಯಲ್ಲಿ ಈ ಅವಘಡ ಸಂಭವಿಸಿದೆ. ಲಾರಿ, ಟ್ಯಾಂಕರ್‌, ಕಾಂಕ್ರೀಟ್‌ ಮಿಕ್ಸರ್‌ನಂತಹ ವಾಹನಗಳಲ್ಲಿ ಅಡಗಿ ಕುಳಿತು ಪ್ರಯಾಣಿಸಿದ್ದಾರೆ.

ಹೀಗೆ ಲಾಕ್​ಡೌನ್​ ನಿಯಮ ಉಲ್ಲಂಘಿಸುವ ತರಾತುರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಸೇವ್‌ ಲೈಫ್‌ ಪ್ರತಿಷ್ಠಾನ ಸಿದ್ಧಪಡಿಸಿರುವ ವರದಿ ತಿಳಿಸಿದೆ.

ಲಾಕ್​ಡೌನ್​ ಆರಂಭದ ದಿನದಿಂದ ಮೇ 3ರವರೆಗಿನ ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ 140 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲಾ ಕರ್ನಾಟಕ, ಕೇರಳ, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಪಂಜಾಬ್‌, ಗುಜರಾತ್‌ನವರು. ಮೃತರಲ್ಲಿ ಶೇ.30ರಷ್ಟು ಮಂದಿ ವಲಸೆ ಕಾರ್ಮಿಕರು, ಇದನ್ನು ಹೊರತುಪಡಿಸಿದರೆ 17 ಮಂದಿ ಅಗತ್ಯ ಸೇವೆ ಪೂರೈಕೆದಾರರು ಕೂಡ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ಮೃತಪಟ್ಟಿವರಲ್ಲಿ ಅಧಿಕ ಮಂದಿ ಪಂಜಾಬ್​ನವರು. ನಂತರದ ಸ್ಥಾನ ಕ್ರಮವಾಗಿ ಕೇರಳ, ದೆಹಲಿ ಹಾಗೂ ಕರ್ನಾಟಕ ಎನ್ನಲಾಗಿದೆ. (ಏಜೆನ್ಸೀಸ್​)