ನ್ಯೂಸ್

ಸರಿಯಾಗಿ ಊಟ ಮಾಡಿ 2 ತಿಂಗಳಾಯ್ತು, ಊರಿಗೆ ಕಳುಹಿಸಿ...

ಹಾಸನ: "ಎರಡು ತಿಂಗಳಿಂದ ಬದುಕು ಸಾಗಿಸುವುದೇ ಕಷ್ಟವಾಗಿದೆ. ಹೊಟ್ಟೆ ತುಂಬಾ ಊಟವೂ ಇಲ್ಲದೆ ಪರದಾಡುತ್ತಿದ್ದೇವೆ. ನಮ್ಮನ್ನು ಊರಿಗೆ ಕಳುಹಿಸಿ ಕೊಡಿ.." ಎನ್ನುತ್ತ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಬೆಳಗ್ಗೆ ನೂರಾರು ವಲಸೆ ಕಾರ್ಮಿಕರು ಜಮಾಯಿಸಿದ್ದರು.

ಇಲ್ಲಿನ "ಹಿಮತ್ ಸಿಂಗ್ ಕಾ' ಕಾರ್ಖಾನೆಯಲ್ಲಿ ಸುಮಾರು 6 ಸಾವಿರ ಮಂದಿ ಕೆಲಸ ಮಾಡುತ್ತಿದ್ದು, ಈ ಪೈಕಿ ಬಿಹಾರ, ಅಸ್ಸಾಂ ಮೂಲದ ಕಾರ್ಮಿಕರೇ ಹೆಚ್ಚು. ಕಾರ್ಖಾನೆಯ ಹಾಸ್ಟೆಲ್​ನಲ್ಲೇ ಕೆಲವರು ಆಶ್ರಯ ಪಡೆದಿದ್ದಾರೆ. ಇನ್ನೂ ಕೆಲವರಿಗೆ ಬಾಡಿಗೆ ಮನೆಯೇ ಗಟ್ಟಿ. ಲಾಕ್​ಡೌನ್​ನಿಂದಾಗಿ ಕೆಲಸವೂ ಇಲ್ಲದೆ, ಅತ್ತ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ಸ್ವಗ್ರಾಮಕ್ಕೆ ಹೋಗಲು ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದಿದರು.

ಬಟ್ಟೆ ಉತ್ಪನ್ನ ತಯಾರಿಸುವ ಹಿಮತ್ ಸಿಂಗ್ ಕಾ ಕಾರ್ಖಾನೆಯು ಲಾಕ್​ಡೌನ್​ ಹಿನ್ನೆಲೆಯಲ್ಲಿ 45 ದಿನಗಳಿಂದ ಬಾಗಿಲು ಹಾಕಿತ್ತು. ಕೆಲಸವಿಲ್ಲದೆ ಎರಡು ತಿಂಗಳಿಂದ ಸರಿಯಾಗಿ ಊಟವೂ ಇಲ್ಲದೆ ಪರದಾಡುತ್ತಿದ್ದೇವೆ. ‌ಕರ್ನಾಟಕ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತೇವೆ ಎಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೂಗಾಡಿ ಕೆಲಕಾಲ ಆತಂಕ ಸೃಷ್ಟಿಸಿದರು.

ಸ್ಥಳಕ್ಕೆ ಬಂದ ಎಡಿಸಿ ಕವಿತಾ ರಾಜಾರಾಮ್​, ನಿಮ್ಮನ್ನು ಕರೆಸಿಕೊಳ್ಳಲು ಹೊರ ರಾಜ್ಯಗಳಿಂದ ಅನುಮತಿ ಬಂದಿಲ್ಲ. ಪರಿಸ್ಥಿತಿ ನೋಡಿಕೊಂಡು ನಮ್ಮ ಕಡೆಯಿಂದ ಎಷ್ಟು ಸಹಾಯ ಸಾಧ್ಯವೋ ಅದನ್ನು ಮಾಡುತ್ತೇವೆ. ಈಗ ನೀವು ಮನೆಗೆ ಹೋಗಿ ಎಂದು ಮನವಿ ಮಾಡಿದರು. ಶೀಘ್ರವೇ ನಮ್ಮ ರಾಜ್ಯಕ್ಕೆ ಕಳಿಸಲು ವ್ಯವಸ್ಥೆ ಮಾಡಬೇಕು ಎಂದು ಗಡುವು ನೀಡಿದ ಕಾರ್ಮಿಕರು ಸ್ಥಳದಿಂದ ತೆರಳಿದರು. ಸದ್ಯ ಎರಡು ದಿನಗಳಿಂದ ಹಿಮತ್ ಸಿಂಗ್ ಕಾ ಕಾರ್ಖಾನೆ ತೆರೆದಿದೆಯಾದರೂ ಅಲ್ಪ ಪ್ರಮಾಣದಲ್ಲಿ ಕೆಲಸ ಆರಂಭಿಸಿದೆ.