

ಮುಂಬೈ: ಆಂಧ್ರ ಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದ ವಿಷಾನಿಲ ದುರಂತ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ಘನ ಘೋರ ದುರಂತ ನಡೆದಿದೆ. ಮಹಾರಾಷ್ಟ್ರದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 15 ಮಂದಿ ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಇಂದು (ಶುಕ್ರವಾರ) ಬೆಳಗ್ಗೆ ಔರಂಗಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಕಾರ್ಗೋ ಗೂಡ್ಸ್ ರೈಲು ಹರಿದು ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿಗಳ ಮೇಲೆ ನಡೆದು ಹೋಗುತ್ತಿದ್ದ ಕಾರ್ಮಿಕರು ಮಹಾರಾಷ್ಟ್ರದ ಕಾರ್ಮಾಡ್ ಬಳಿ ರೈಲು ಹಳಿಗಳ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ 5:15ರ ಸುಮಾರಿಗೆ ಮಲಗಿದ್ದವರ ಮೇಲೆ ರೈಲು ಹರಿದಿದೆ. ಘಟನೆ ನಡೆದ ಸ್ಥಳಕ್ಕೂ ಮುಂಬೈಗೂ 360 ಕಿ.ಮೀ ಅಂತರವಿದೆ.
ವಲಸೆ ಕಾರ್ಮಿಕರಲ್ಲಿ ತುಂಬಾ ತುರ್ತಿನ ಅವಶ್ಯ ಇರುವವರಿಗಾಗಿಯೇ ಅನೇಕ ರಾಜ್ಯಗಳು ವಿಶೇಷ ಶ್ರಮಿಕ್ ಎಕ್ಸ್ಪ್ರೆಸ್ ರೈಲಿನ ಮೂಲಕ ತವರಿಗೆ ಕರೆಸಿಕೊಳ್ಳುತ್ತಿವೆ. ಆದರೆ, ಕೆಲವರು ಕಾಲ್ನಡಿಗೆಯಲ್ಲೇ ತವರಿಗೆ ಮರಳುವ ನಿರ್ಧಾರ ಮಾಡಿ ಅನೇಕ ದಿನಗಳಿಂದ ನಡೆದುಕೊಂಡೇ ಸಾಗುತ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಮತ್ತು ಪೊಲೀಸ್ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದೆ ಎಂದು ಸೌಥ್ ಸೆಂಟ್ರಲ್ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)