ನ್ಯೂಸ್

ಕೋವಿಡ್ ಕೇಂದ್ರಗಳನ್ನು ನೋಡಿಕೊಳ್ಳಲು ಸೇನೆಯನ್ನು ಕರೆಸಿಲ್ಲ; ಗೃಹ ಸಚಿವಾಲಯದ ಸ್ಪಷ್ಟನೆ

sspmiracle1982

ನವದೆಹಲಿ: ದೆಹಲಿಯ ಕೋವಿಡ್ -19 ಆರೈಕೆ ಕೇಂದ್ರಗಳಿಗೆ ಭಾರತೀಯ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂಬ ಮಾಧ್ಯಮಗಳ ಕೆಲವು ವರದಿಗಳಿಗೆ ಗೃಹ ಸಚಿವಾಲಯ (ಎಂಎಚ್‌ಎ) ಶುಕ್ರವಾರ ಪ್ರತಿಕ್ರಿಯಿಸಿದ್ದು, ಇದನ್ನು "ವಾಸ್ತವದಿಂದ ದೂರವಿರುವ ಸುದ್ದಿ" ಎಂದು ಕರೆದಿದೆ.

ಭಾರತೀಯ ಸೇನೆಯನ್ನು ಕರೆಸಿಲ್ಲ ಮತ್ತು ಸಶಸ್ತ್ರ ಪಡೆ ಮತ್ತು ಸಿಎಪಿಎಫ್‌ನ ವೈದ್ಯಕೀಯ ಸಿಬ್ಬಂದಿಯನ್ನು ಮಾತ್ರ ದೆಹಲಿಯ ಕೆಲವು ವೈದ್ಯಕೀಯ ಕೇಂದ್ರಗಳಲ್ಲಿ ಸಹಾಯ ಮಾಡಲು ಕೋರಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಕರಣಗಳು ಉಲ್ಬಣಗೊಂಡಂತೆ ದೆಹಲಿಯಲ್ಲಿ ಆರೈಕೆ ಕೇಂದ್ರಗಳನ್ನು ನಡೆಸಲು ಭಾರತ ಸೇನೆಯನ್ನು ಕರೆದಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಈ ಸುದ್ದಿ ವಾಸ್ತವದಿಂದ ದೂರವಿದೆ ಎಂದು ಸಚಿವಾಲಯ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಈ ರೀತಿ ಸ್ಪಷ್ಟಪಡಿಸಿದೆ- 'ಸೇನೆಯನ್ನು ಕರೆಸಲಾಗಿಲ್ಲ, ಸಶಸ್ತ್ರ ಪಡೆ ಹಾಗೂ ಸಿಎಪಿಎಫ್​​ನ ವೈದ್ಯಕೀಯ ಸಿಬ್ಬಂದಿಯನ್ನು ಮಾತ್ರ ದೆಹಲಿ ವೈದ್ಯಕೀಯ ಕೇಂದ್ರಗಳಿಗೆ ಸಹಾಯ ಮಾಡಲು ಕೋರಲಾಗಿದೆ' ಎಂದಿದೆ.

ಸ್ಪಷ್ಟೀಕರಣವನ್ನು ನೀಡುವ ಮೊದಲು, ಗೃಹ ಸಚಿವಾಲಯವು ದಕ್ಷಿಣ ದೆಹಲಿಯ ಛತ್ತರ್​ಪುರ ಪ್ರದೇಶದಲ್ಲಿ ಇತ್ತೀಚೆಗೆ ಆರಂಭಿಸಲಾದ ಕೋವಿಡ್ ಆರೈಕೆ ಕೇಂದ್ರದ ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದೆ. ಚಿತ್ರಗಳಲ್ಲಿ ಅನೇಕ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಪಿಬಿ) ವೈದ್ಯಕೀಯ ಸಿಬ್ಬಂದಿ ಕೇಂದ್ರದ ಸುಗಮ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳಲು ಅಲ್ಲಿ ಬೀಡುಬಿಟ್ಟಿರುವುದನ್ನು ಕಾಣಬಹುದು.