ಮೊದಲನೇ ಸ್ವಪ್ನ: ‘ಇಡೀ ಭೂಮಿ ಹಾಸಿಗೆಯಂತಿದ್ದು ಹಿಮಾಲಯದ ಪರ್ವತಗಳು ತಲೆ ದಿಂಬಿನಂತಿದ್ದು, ಅದರ ಮೇಲೆ ಮಲಗಿದ್ದು, ಅವರ ಎಡಗೈ ಪೂರ್ವದ ಸಮುದ್ರದ ಮೇಲೆ ಮತ್ತು ಬಲಗೈ ಪಶ್ಚಿಮದ ಸಮುದ್ರದ ಮೇಲೆ ಚಾಚಿದ್ದು ಮತ್ತು ಕಾಲುಗಳು ದಕ್ಷಿಣದ ಸಮುದ್ರದಲ್ಲಿ ಚಾಚಿರುತ್ತವೆ’. ಈ ಸ್ವಪ್ನದ ಅರ್ಥವೇನೆಂದು ಬುದ್ಧರು ಯೋಚಿಸಿದಾಗ, ಪರಿಪೂರ್ಣ ಬೋಧಿಯನ್ನು ಪಡೆಯುವುದಕ್ಕೆ ಬಹಳ ದೀರ್ಘಕಾಲದವರೆಗೆ ಬೋಧಿಸತ್ವರಾಗಿ, ಹತ್ತು ಪಾರಮಿಗಳನ್ನ, ಅಂದರೆ ಮನಸ್ಸಿನ ಒಳ್ಳೆ ಗುಣಗಳನ್ನು ಪರಿಪೂರ್ಣಗೊಳಿಸಿದ್ದರು. ಅವುಗಳ ಬಲದಿಂದ ಈ ಎಲ್ಲ ದುಃಖಗಳಿಂದ ಮುಕ್ತವಾಗಿ ಪರಮಸುಖದ ಜ್ಞಾನವನ್ನು ಪಡೆಯುವ ವಿಶ್ವಾಸವನ್ನು ಹೊಂದಿದ್ದರು. ಆ ದಿನ, ಮುಂದೆ ಬೋಧಿ ಪಡೆದು ಬುದ್ಧರಾಗುವ ಸಂಕೇತವಾಗಿ ಈ ಸ್ವಪ್ನವನ್ನು ಕಂಡಿದ್ದರು.
ಎರಡನೇ ಸ್ವಪ್ನ: ಬುದ್ಧರು ಮಲಗಿದ್ದಾಗ ಅವರ ಹೊಕ್ಕುಳಿನಿಂದ ಒಂದು ಹುಲ್ಲು (ತುರಿಯ ಹುಲ್ಲು), ಬೆಳೆಯುತ್ತ ಅನಂತ ಆಕಾಶದಲ್ಲಿ ಹೋಗುತ್ತದೆ. ಇದರ ಅರ್ಥವೇನೆಂದರೆ, ‘ನಾನು ಬುದ್ಧನಾಗಿ ಇಡೀ ತ್ರಿಲೋಕಕ್ಕೆ (ಕಾಮಲೋಕ, ರೂಪಲೋಕ ಹಾಗೂ ಅರೂಪಲೋಕ) ಮನುಷ್ಯರಿಗೂ, ದೇವತೆಗಳಿಗೂ ಈ ಮುಕ್ತಿಯ ಮಾರ್ಗವನ್ನು ತೋರಿಸುತ್ತೇನೆ’. ಕೆಳಹಂತದ ಜೀವಿಗಳಿಂದ ಹಿಡಿದು ಉನ್ನತವಾದ ದೇವತೆಗಳಿಗೆ ಅಷ್ಟಾಂಗಿಕ ಮಾರ್ಗದ ಧಮ್ಮವು ಎಲ್ಲರಿಗೂ ತಲುಪಿ ನಿಬ್ಬಾಣದ ಮಾರ್ಗವನ್ನು ತೋರಿಸುತ್ತದೆ.
ಮೂರನೇ ಸ್ವಪ್ನ: ಬುದ್ಧರು ಕುಳಿತಿದ್ದಾಗ, ತಲೆಗಳು ಕಪ್ಪಾಗಿದ್ದು, ಶರೀರ ಬಿಳಿಯಾದ, ಅನೇಕ ಹುಳುಗಳು ಬೋಧಿಸತ್ವರ ಪಾದದ ಮೇಲೆ ಹತ್ತಿ ಪಾದಗಳನ್ನೇಲ್ಲ ಆವರಿಸಿ ತುಂಬಿ ತುಂಬಿ ತುಳುಕುತ್ತಿರುತ್ತವೆ. ಈ ಸ್ವಪ್ನದ ಅರ್ಥವೇನೆಂದರೆ, ಬುದ್ಧರಾಗಿ ಹಗಲು-ರಾತ್ರಿ ಕಷ್ಟಪಟ್ಟು ಊರಿಂದ ಊರಿಗೆ (ಚಾರಿಕ) ಸುತ್ತಿ ಧಮ್ಮೋಪದೇಶವನ್ನು ನೀಡುತ್ತಾರೆ, ಆಗ ಎಣಿಸಲಾಗದಷ್ಟು ಗೃಹಸ್ಥರು ಧಮ್ಮವನ್ನ ಕೇಳಿ ಬುದ್ಧ, ಧಮ್ಮ ಮತ್ತು ಸಂಘದಲ್ಲಿ ಶರಣು ಹೋಗಿ ಧಮ್ಮದ ರುಚಿಯನ್ನು ಕಂಡುಕೊಳ್ಳುತ್ತಾರೆ, ಅಂದರೆ, ದುಃಖದಿಂದ ಮುಕ್ತರಾಗಿ ನಿಬ್ಬಾಣವನ್ನು ಅನುಭವಿಸುತ್ತಾರೆ.
ನಾಲ್ಕನೇ ಸ್ವಪ್ನ: ನಾಲ್ಕು ದಿಕ್ಕುಗಳಿಂದ ನಾಲ್ಕು ವಿವಿಧ ಬಣ್ಣಗಳ ಪಕ್ಷಿಗಳು ಬುದ್ಧರ ಪಾದದ ಬಳಿ ಬಂದು ಕುಳಿತುಕೊಳ್ಳುತ್ತವೆ. ತಕ್ಷಣವೇ ಆ ಪಕ್ಷಿಗಳು ಬಿಳಿ ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತವೆ. ಈ ಸ್ವಪ್ನದ ಅರ್ಥವೇನೆಂದರೆ, ‘ಈ ಧಮ್ಮವನ್ನು ಸಮಸ್ತಲೋಕದ ಕಲ್ಯಾಣಕ್ಕಾಗಿ ನಾನು ಬೋಧಿಸುತ್ತೇನೆ. ನಾನು ಬೋಧಿಸಿದಾಗ
ಯಾವುದೇ ಜಾತಿ, ಕುಲ, ಗೋತ್ರ, ಧರ್ಮವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಸಮನಾಗಿ ಬೋಧಿಸುತ್ತೇನೆ. ಆಗೆಲ್ಲ ಜಾತಿಯ ಜನರು ಧಮ್ಮವನ್ನು ಕೇಳಿ ಶಿಷ್ಯರಾಗುತ್ತಾರೆ. ಯಾವಾಗ ನನ್ನ ಶಿಷ್ಯರಾಗುತ್ತಾರೊ ಅವರು ಎಲ್ಲರೂ ಒಂದೇ ಎಂದು ತಿಳಿದು, ಎಲ್ಲ ರೀತಿಯ ಭೇದಭಾವಗಳು ನಾಶವಾಗುತ್ತವೆ’.
ಐದನೇ ಸ್ವಪ್ನ: ಬುದ್ಧರು ಮಲ ಮತ್ತು ಕೊಳಕುಗಳಿಂದ ಕೂಡಿದಂಥ ಒಂದು ದೊಡ್ಡ ಪರ್ವತದ ಮೇಲೆ ನಡೆಯುವ ಧ್ಯಾನವನ್ನು ಮಾಡುತ್ತಿರುತ್ತಾರೆ. ಅದು ಯಾವ ರೀತಿ ಎಂದರೆ, ಬುದ್ಧರು ಆ ಪರ್ವತದ ಮೇಲೆ ನಡೆಯುವ ಧ್ಯಾನ (ಚಂಕಮನ ಧ್ಯಾನ) ಮಾಡುತ್ತಿದ್ದಾಗ ಅವರ ಪಾದಗಳು ಪರ್ವತವನ್ನು ರ್ಸ³ಸುವುದಿಲ್ಲ ಮತ್ತು ಕೊಳಕುಗಳು ಅವರಿಗೆ ಅಂಟಿಕೊಳ್ಳುವುದಿಲ್ಲ. ಈ ಸ್ವಪ್ನದ ಅರ್ಥವೇನೆಂದರೆ, ‘ಈ ಲೋಕದಲ್ಲಿ ಅನೇಕ ಜನರನ್ನು, ಅನೇಕ ಪರಿಸ್ಥಿತಿಗಳನ್ನು ನಾನು ಎದುರಿಸಬೇಕಾಗುತ್ತದೆ. ಈ ಜನರು ನನಗೆ ಆಹಾರ, ಬಟ್ಟೆ, ವಿಹಾರ ಮತ್ತು ಇನ್ನಿತರ ವಸ್ತುಗಳನ್ನು ನೀಡುತ್ತಾರೆ, ಅನೇಕರು ಪ್ರಶಂಸೆ ಮತ್ತು ನಿಂದನೆಯನ್ನು ಮಾಡುತ್ತಾರೆ. ಈ ಜಗತ್ತಿನಲ್ಲಿ ಏನೆಲ್ಲ ಸಂಭವಿಸಿದರೂ ಅವು ನನ್ನನ್ನು ರ್ಸ³ಸುವುದಿಲ್ಲ. ಆ ಲೋಕದ ಪ್ರಭಾವ ನನ್ನ ಮೇಲೆ ಬಿದ್ದರೂ ಅವುಗಳಿಂದ ನನಗೆ ಯಾವುದೇ ಪರಿಣಾಮ ಆಗುವುದಿಲ್ಲ. ನಾನು ಅವುಗಳನ್ನೆಲ್ಲ ಮೀರಿ ಹೋಗಿರುತ್ತೇನೆ’. ಈ ಐದು ಸ್ವಪ್ನಗಳನ್ನು ಬೋಧಿಸತ್ವ ಸಿದ್ಧಾರ್ಥ ಗೌತಮ ಬೆಳಗ್ಗೆ ಎದ್ದು ಧ್ಯಾನದಲ್ಲಿ ವಿಶ್ಲೇಷಣೆ ಮಾಡಿ ಇವುಗಳ ಅರ್ಥ ತಿಳಿದುಕೊಂಡಾಗ ಅವರಿಗೆ ಸಂತೋಷ ಮತ್ತು ಸಮಾಧಾನ ಉಂಟಾಗುತ್ತದೆ. ನಂತರ ಅವರು ಧ್ಯಾನವನ್ನು ಪ್ರಾರಂಭ ಮಾಡಿ, ಮಾರ ಯುದ್ಧದಲ್ಲಿ ಮಾರನನ್ನು ಸೋಲಿಸುತ್ತಾರೆ. ಸಂಜೆ 6 ಗಂಟೆಯ ನಂತರ ಬುದ್ಧರು ಮೊದಲನೇ ಯಾಮದಲ್ಲಿ ತಮ್ಮ ‘ಪುಬ್ಬೇನಿವಾನುಸ್ಸತಿ’ ಅಂದರೆ ತನ್ನ ಪೂರ್ವಜನ್ಮಗಳನ್ನು ಸ್ಮರಿಸುತ್ತ, ಕಾರ್ಯಕಾರಣದ ಸಂಬಂಧದ ಸತ್ಯವನ್ನು ಕಂಡು ಹಿಡಿಯುತ್ತಾರೆ. ರಾತ್ರಿ 10ರಿಂದ 2ರವರೆಗೆ ‘ಚತೊಪಪಾತ ಜ್ಞಾನ’ ಅಂದರೆ ಇತರರ ಹುಟ್ಟು-ಮರಣಗಳನ್ನು ನೋಡುತ್ತಾರೆ. ಶರೀರ ಮತ್ತು ಮನಸ್ಸುಗಳಿಗೆ ಹಾಗೂ ಹುಟ್ಟಿಗೆ ಕಾರಣವೇನು? ಸಾವಿಗೆ ಕಾರಣವೇನು? ಇತ್ಯಾದಿ ಸತ್ಯಗಳನ್ನು ಅರಿಯುತ್ತಾರೆ. ರಾತ್ರಿ 2ರಿಂದ 6ರವರೆಗೆ ನಾಲ್ಕು ಆರ್ಯಸತ್ಯಗಳನ್ನು ಅರಿಯುತ್ತಾರೆ. ದುಃಖ, ಸತ್ಯ ಮತ್ತು ಅದರ ಆಳವನ್ನು ತಿಳಿಯುತ್ತಾರೆ, ಹಾಗೆಯೇ
ದುಃಖದ ಕಾರಣವಾದ ತೃಷ್ಣೆಯನ್ನು ಅರಿತು ಅದನ್ನು ಸಂಪೂರ್ಣವಾಗಿ ನಾಶಗೊಳಿಸುತ್ತಾರೆ. ಮುಂದೆ ಮೂರನೇ ಆರ್ಯಸತ್ಯವಾದ ದುಃಖದ ಅಂತ್ಯ ಅಂದರೆ ನಿಬ್ಬಾಣವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಬೇಕಾದ ಆರ್ಯ ಅಷ್ಠಾಂಗಿಕ ಮಾರ್ಗವನ್ನು ಸಂಪೂರ್ಣವಾಗಿ ಬೆಳೆಸಿಕೊಳ್ಳುತ್ತಾರೆ. ಎಲ್ಲವನ್ನೂ ಸ್ವಯಂ ತಿಳಿದ ‘ಸಮ್ಮಾಸಂಬುದ್ಧ’ ರಾಗುತ್ತಾರೆ, ಇದು ಭಗವಾನ್ ಬುದ್ಧರ ಜ್ಞಾನೋದಯದ, ವೈಶಾಖ ಪೂರ್ಣಿಮೆಯ ದಿನ ನಡೆದಂಥ ಘಟನೆಗಳು. ಭಗವಾನ್ ಬುದ್ಧರ ಆಶೀರ್ವಾದ ಎಲ್ಲರ ಮೇಲೆ ಇರಲಿ.
ಭವತು ಸಬ್ಭ ಮಂಗಳಂ
(ಲೇಖಕರು ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ)