ಲಖನೌ: ಗಂಡ ಸತ್ತ ನಂತರ ಮಾನಸಿಕ ಅಸ್ವಸ್ಥಳಾಗಿದ್ದ ಮಹಿಳೆಯ ಮೇಲೆ ಕಾರ್ಮಿಕನೊಬ್ಬ ಅತ್ಯಾಚಾರವೆಸಗಿರುವ ಕೃತ್ಯ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
50 ವರ್ಷದ ಮಹಿಳೆಯೊಬ್ಬಳಿಗೆ ಗಂಡ ತೀರಿಕೊಂಡಿದ್ದು ಆಕೆ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾಳೆ. ಅದೇ ಕಾರಣಕ್ಕೆ ಆಕೆಯ ಮನೆಯವರೂ ಅವಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಸಂಬಂಧಿಕರಿಂದ ದೂರಾಗಿದ್ದ ಆಕೆ ಜಿಲ್ಲೆಯ ತಿಲ್ಹಾರ್ ನಗರದ ಟೆಂಟ್ ಒಂದರಲ್ಲಿ ವಾಸವಿದ್ದಾಳೆ. ಅಲ್ಲಿಲ್ಲಿ ಸುತ್ತಾಡಿ ಅವರಿವರು ಕೊಡುವ ಊಟ ತಿಂದು ಜೀವನ ನಡೆಸುತ್ತಿದ್ದಾಳೆ. ಈ ಒಂಟಿ ಮಹಿಳೆಯ ಮೇಲೆ ಅಲ್ಲೇ ಪಕ್ಕದಲ್ಲಿ ವಾಸವಿದ್ದ ಕಾರ್ಮಿಕನೊಬ್ಬನ ಕಣ್ಣು ಬಿದ್ದಿದೆ.
ಇತ್ತೀಚೆಗೆ ರಾತ್ರಿ 9.30ರ ಸಮಯಕ್ಕೆ ಆಕೆಯ ಟೆಂಟ್ ಬಳಿ ಹೋದ ಕಾರ್ಮಿಕ ರಾಜೇಂದ್ರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯವನ್ನು ಸ್ಥಳೀಯನೊಬ್ಬ ನೋಡಿದ್ದು, ಬೇರೆಯವರಿಗೂ ವಿಚಾರ ತಿಳಿಸಿದ್ದಾನೆ. ಆರೋಪಿಯನ್ನು ಅವರೇ ಸೆರೆ ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. (ಏಜೆನ್ಸೀಸ್)