| ಅವಿನಾಶ್ ಜೈನಹಳ್ಳಿ ಮೈಸೂರು
ಜನಸಂಖ್ಯಾ ಸ್ಫೋಟ ತಡೆಯುವ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿರುವ ಪುರುಷರ ಸಂಖ್ಯೆ ರಾಜ್ಯದಲ್ಲಿ ಈ ವರ್ಷ ಇಳಿಮುಖವಾಗಿದೆ. ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ (ಎನ್ಎಸ್ವಿ) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಲೈಂಗಿಕ ಸಾಮರ್ಥ್ಯ ಹಾಗೂ ದುಡಿಯುವ ಶಕ್ತಿ ಕುಂದುತ್ತದೆ ಎಂಬ ಮೂಢನಂಬಿಕೆಗೆ ಕಟ್ಟು ಬಿದ್ದಿರುವ ಪುರುಷರು ಎನ್ಎಸ್ವಿಗೆ ಹಿಂದೇಟು ಹಾಕುತ್ತಿದ್ದಾರೆ.
ಪ್ರತಿ ತಿಂಗಳು ರಾಜ್ಯದಲ್ಲಿ 40 ರಿಂದ 50 ಸಾವಿರ ಮಹಿಳೆಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡು ತ್ತಿದ್ದು, ಪುರುಷರ ಸಂಖ್ಯೆ ತೀರಾ ಕಡಿಮೆ. 5 ವರ್ಷದ ಹಿಂದೆ 3 ರಿಂದ 4 ಸಾವಿರ ಪುರುಷರು ಈ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದರು. 2021-22ನೇ ಸಾಲಿನಲ್ಲಿ ಕೋವಿಡ್ ಆತಂಕದ ನಡುವೆಯೂ 649 ಜನರು 2022-23ರಲ್ಲಿ 829 ಪುರುಷರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೆ, 2023-24ರಲ್ಲಿ 543 ಜನರಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಹಿಳೆಯರಲ್ಲಿ ಜಾಗೃತಿ ಮೂಡಿದ್ದರಿಂದ ಸ್ವಯಂ ಪ್ರೇರಣೆಯಿಂದ ಸಂತಾನಶಕ್ತಿಹರಣ ಚಿಕಿತ್ಸೆಗೆ ಒಳಪಡುತ್ತಾರೆ. ಆದರೆ, ಪುರುಷರು ಮಹಿಳೆಯರಷ್ಟೇ ಪ್ರಧಾನ ಪಾತ್ರ ವಹಿಸಲು ಆಸಕ್ತಿ ತೋರುತ್ತಿಲ್ಲ.
ಚಾಮರಾಜನಗರ, ರಾಯಚೂರು ಶೂನ್ಯ: ಈ ಸಾಲಿನಲ್ಲಿ ಗಡಿ ಜಿಲ್ಲೆಗಳಾದ ಚಾಮರಾಜನಗರ ಮತ್ತು ರಾಯಚೂರಿನಲ್ಲಿ ಶೂನ್ಯ ವರದಿ ದಾಖಲಾಗಿದೆ. ಬಳ್ಳಾರಿ, ಯಾದಗಿರಿ, ಕಲಬುರಗಿ ಜಿಲ್ಲೆಯಲ್ಲಿ ತಲಾ 1, ರಾಮನಗರದಲ್ಲಿ 2, ಗದಗ, ಚಿಕ್ಕಮಗಳೂರಿನಲ್ಲಿ ತಲಾ 3 ಪುರುಷರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಅತಿ ಹೆಚ್ಚು ವಿಜಯಪುರದಲ್ಲಿ 84, ಧಾರವಾಡ 72, ದಕ್ಷಿಣಕನ್ನಡ 53, ಬೆಳಗಾವಿ ಜಿಲ್ಲೆಯಲ್ಲಿ 46 ಪುರುಷರು ಚಿಕಿತ್ಸೆ ಒಳಪಟ್ಟಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರ 30, ಬೆಂಗಳೂರು ನಗರ 32, ಬಿಬಿಎಂಪಿ 24, ಶಿವಮೊಗ್ಗ 22, ಕೊಡಗು 13, ಮೈಸೂರು 7, ಬಾಗಲಕೋಟೆ 6, ಬೆಂಗಳೂರು ಗ್ರಾಮಾಂತರ 9, ಬೀದರ್ 24, ಚಿತ್ರದುರ್ಗ 8, ದಾವಣಗೆರೆ 10, ಹಾಸನ 16, ಹಾವೇರಿ 5, ಕೋಲಾರ 4, ಕೊಪ್ಪಳ 5, ಮಂಡ್ಯ 8, ಉಡುಪಿ 16, ಉತ್ತರ ಕನ್ನಡ 15, ವಿಜಯನಗರ 15 ಪುರುಷರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಹಿಂದೇಟಿಗೆ ಕಾರಣವೇನು?: ಎನ್ಎಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನೂರಾರು ಜನರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇದುವರೆಗೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದರೂ ಜನ ನಿರಾಸಕ್ತಿ ತೋರುತ್ತಿರá-ವುದು ಪ್ರಮುಖ ಕಾರಣ. ಅದೆಲ್ಲ ಮಹಿಳೆಯರಿಗೆ ಬಿಟ್ಟ ವಿಚಾರ ಎಂಬ ತಾತ್ಸಾರವೂ ಇದೆ.
ಎನ್ಎಸ್ವಿ ಶಸ್ತ್ರಚಿಕಿತ್ಸೆಯಿಂದ ಲೈಂಗಿಕ ಹಾಗೂ ದೈಹಿಕ ಶಕ್ತಿ ಕುಂದುವುದಿಲ್ಲ. ಸುಲಭದ ಕೆಲಸವಾಗಿದ್ದರೆ 48 ಗಂಟೆಗಳ ನಂತರ ಆರಂಭಿಸಬಹುದು. ಸೈಕಲ್ ತುಳಿಯುವುದು ಅಥವಾ ಇಂಥದ್ದೇ ಬೇರೆ ಕೆಲಸಗಳಾಗಿದ್ದಲ್ಲಿ 7 ದಿನಗಳ ನಂತರ ಮಾಡಬಹುದು ಎಂದು ಮಾಹಿತಿ ನೀಡುತ್ತಾರೆ.
| ಡಾ.ಗೋಪಿನಾಥ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ