ನವದೆಹಲಿ: ಶ್ರದ್ಧಾ ವಾಕರ್ ಭೀಕರ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ಗೆ ಇಂದು ಸಂಜೆ ಖಡ್ಗಧಾರಿಗಳ ಗುಂಪು ಅಡ್ಡಗಟ್ಟಿದ ಘಟನೆಯೊಂದು ನಡೆದಿದೆ. ಪೊಲೀಸರು ಪ್ರಕರಣವನ್ನು ಸಮರ್ಥವಾಗಿ ಎದುರಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಪಶ್ಚಿಮ ದೆಹಲಿಯಲ್ಲಿನ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಯಿಂದ ಜೈಲಿಗೆ ವಾಪಸ್ ಕರೆದುಕೊಂಡು ಬರುತ್ತಿರುವಾಗ ಎಫ್ಎಸ್ಎಲ್ ಕಟ್ಟಡದ ಹೊರಗೆ ಈ ಪ್ರಕರಣ ನಡೆದಿದೆ. ಈ ದಾಳಿಗೆ ಹಿಂದೂ ಸೇನಾ ಹೊಣೆಯನ್ನು ಹೊತ್ತುಕೊಂಡಿದೆ. ಹಿಂದೂ ಸೇನಾ ಎಂಬ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ, ಅಫ್ತಾಬ್ ಹೇಗೆ ಹಿಂದೂ ಹುಡುಗಿಯನ್ನು ತುಂಡು ತುಂಡಾಗಿಸಿದ ಎಂಬುದನ್ನು ನೋಡಲು ಇಡೀ ದೇಶವೇ ಕಾಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಖಡ್ಗಧಾರಿಗಳು ಅವರ ಕಾರನ್ನು ಪೊಲೀಸ್ ವ್ಯಾನ್ಗೆ ಅಡ್ಡಲಾಗಿ ನಿಲ್ಲಿಸಿದ್ದರು. ಬಳಿಕ ಐವರು ಖಡ್ಗ ಝಳಪಿಸುತ್ತ ಪೊಲೀಸ್ ವ್ಯಾನ್ನತ್ತ ಬಂದಿದ್ದರು. ಆದರೆ ಪೊಲೀಸರು ಅವರ ಆಯುಧ ತೆಗೆದು ಖಡ್ಗಧಾರಿಗಳನ್ನು ಎದುರಿಸಿದ್ದರು. ಇದರಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಇಬ್ಬರು ಖಡ್ಗಧಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ತಮ್ಮ ಹೆಸರನ್ನು ನಿಗಮ್ ಗುಜ್ಜಾರ್, ಕುಲ್ದೀಪ್ ಥಾಕೂರ್ ಹಾಗೂ ತಾವು ಗುರುಗ್ರಾಮ ನಿವಾಸಿಗಳು ಮತ್ತು ಹಿಂದೂ ಸೇನಾ ಸದಸ್ಯರು ಎಂಬುದಾಗಿ ಹೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.