ನ್ಯೂಸ್

ಕುಡಿದ ಮತ್ತಿನಲ್ಲಿ ಅಪ್ರಾಪ್ತ ವಯಸ್ಕಳ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ ದುರುಳರು

ಹೈದರಾಬಾದ್​: ಆಘಾತಕಾರಿ ಘಟನೆಯೊಂದರಲ್ಲಿ ಮೂವರು ದುರುಳರು ಅಪ್ರಾಪ್ತ ವಯುಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ಮೀರ್​ಪೇಟ್​ ಪ್ರದೇಶದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು, ಸಂತ್ರಸ್ತೆಯ ರಕ್ಷಣೆಗೆ ಧಾವಿಸಿದ ಆಕೆಯ ಸಹೋದರನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ರಾಚಕೊಂಡ ಡಿಸಿಪಿ ಸಾಯಿ ಶ್ರೀ ಘಟನೆ ಭಾನುವಾರ ಬೆಳಗ್ಗೆ 9:30ರ ಸುಮಾರಿಗೆ ನಡೆದಿದ್ದು, ಮೂವರು ಆರೋಪಿಗಳು ಕುಡಿದ ಮತ್ತಿನಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿ ಯಾರು ಇಲ್ಲದ ವಿಚಾರ ತಿಳಿದ ಆರೋಪಿಗಳು ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾರೆ.

ಬಾಲಕಿ ಜೋರಾಗಿ ಚೀರಿಕೊಂಡಿದ್ದು, ಆಕೆಯ ನೆರವಿಗೆ ಸಹೋದರ ಧಾವಿಸಿದ್ದಾನೆ. ಈ ವೇಳೆ ಮೂವರು ಆರೋಪಿಗಳು ಸಂತ್ರಸ್ತೆ ಹಾಗೂ ಆಕೆಯ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಲಾಟೆ ಶಬ್ದ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದು, ವಿಚಾರವನ್ನು ಪೊಲೀಸರಿಗೆ ತಿಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಲೆಮಾರಿಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗಾಗಿ ಏಳು ತಂಡಗಳನ್ನು ರಚಿಸಲಾಗಿದ್ದು, ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರಾಚಕೊಂಡ ಡಿಸಿಪಿ ಸಾಯಿ ಶ್ರೀ ತಿಳಿಸಿದ್ದಾರೆ.