ನ್ಯೂಸ್

ಅಮೆರಿಕದ ಪ್ರಥಮ ಪ್ರಜೆ ಪತ್ನಿ ಮೆಲೇನಿಯಾ ಟ್ರಂಪ್​ ಮರದ ಪ್ರತಿಮೆ ದಹನ

ರೊಜ್ನೋ (ಸ್ಲೊವೇನಿಯಾ): ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಪತ್ನಿ ಮೆಲೇನಿಯಾ ಟ್ರಂಪ್​ ಅವರ ಮರದ ಪ್ರತಿಕೃತಿಯನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಮೆಲೇನಿಯಾ ಅವರು ಮೂಲತಃ ಸ್ಲೊವೇನಿಯಾದ ಸೆವ್ನಿಕಾದವರು. ಡೊನಾಲ್ಡ್​ ಟ್ರಂಪ್​ ಅವರು ಅಮೆರಿಕ ಅಧ್ಯಕ್ಷರಾದ ನಂತರದಲ್ಲಿ ಅವರ ಪತ್ನಿ ಎಂಬ ಕಾರಣಕ್ಕೆ ಬರ್ಲಿನ್​ನಲ್ಲಿ ನೆಲೆಸಿರುವ ಅಮೆರಿಕದ ಕಲಾವಿದ ಬ್ರಾಡ್​ ಡೌನಿ ಮೆಲೇನಿಯಾ ಅವರ ಪ್ರತಿಮೆಯನ್ನು ನಿರ್ಮಿಸಿ, ಸ್ಥಾಪಿಸಿದ್ದರು.

ಡೊನಾಲ್ಡ್​ ಟ್ರಂಪ್​ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಮೆಲೇನಿಯಾ ನೀಲಿ ಬಣ್ಣದ ಕೋಟ್​ ಧರಿಸಿದ್ದರು. ಸಂತಸದಿಂದ ಆಕಾಶದೆಡೆಗೆ ಕೈಮುಷ್ಟಿ ತೋರಿಸಿದ್ದರು. ಅವರ ಇದೇ ಧಿರಿಸು ಮತ್ತು ಭಂಗಿಯ ಆಳೆತ್ತರದ ಪ್ರತಿಮೆ ಇದಾಗಿತ್ತು. ಸೆವ್ನಿಕಾದ ಹೊರಭಾಗದಲ್ಲಿದ್ದ ಒಣಗಿದ್ದ ಮರದ ಕಾಂಡವನ್ನು ಚೈನ್​ಸಾದಿಂದ ಕೊರೆದು ಅದನ್ನು ನಿರ್ಮಿಸಿ, 2019ರ ಜುಲೈ 5ರಂದು ಅನಾವರಣಗೊಳಿಸಲಾಗಿತ್ತು.

ಆದರೆ 2020ರ ಜುಲೈ 4ರಂದು ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತವರ ಪತ್ನಿ ಮೆಲೇನಿಯಾ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರೆ, ಇತ್ತ ಸೆವ್ನಿಕಾದಲ್ಲಿ ದುಷ್ಕರ್ಮಿಗಳು ಮೆಲೇನಿಯಾ ಅವರ ಪ್ರತಿಮೆಯನ್ನು ಸುಟ್ಟುಹಾಕಿದ್ದಾರೆ.

1990ರಲ್ಲಿ ವಲಸೆ ಹೋದವರು: ಮೆಲೇನಿಯಾ ಟ್ರಂಪ್​ ಯುಗೊಸ್ಲಾವಿಯಾದ ಭಾಗವಾಗಿದ್ದ ಸ್ಲೊವೇನಿಯಾದಲ್ಲಿ ಹುಟ್ಟಿ ಬೆಳೆದವರು. ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದ ಅವರು 1990ರಲ್ಲಿ ಅಮೆರಿಕಕ್ಕೆ ವಲಸೆ ಬಂದು ಅಲ್ಲಿಯೇ ನೆಲೆಸಿದ್ದರು. ಸೆವ್ನಿಕಾದಲ್ಲಿ ಅವರ ಪ್ರತಿಮೆ ಸ್ಥಾಪಿಸಿದರೆ ಅದು ಅಮೆರಿಕದ ವಲಸೆ ನೀತಿ ಕುರಿತು ರಾಜಕೀಯ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ ತಾವು ಈ ಪ್ರತಿಮೆಯನ್ನು ನಿರ್ಮಿಸಿ, ಸ್ಥಾಪಿಸಿದ್ದಾಗಿ ಡೌನಿ ಹೇಳಿದ್ದಾರೆ.

ಪೊಲೀಸರಿಗೆ ದೂರು: ದುಷ್ಕರ್ಮಿಗಳು ಅದೇಕೆ ಮೆಲೇನಿಯಾ ಟ್ರಂಪ್​ ಅವರ ಪ್ರತಿಮೆಯನ್ನು ಸುಟ್ಟರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದೇನೆ. ಒಂದು ವೇಳೆ ದುಷ್ಕರ್ಮಿಗಳು ಸಿಕ್ಕಿಬಿದ್ದರೆ ಅವರನ್ನು ಮಾತನಾಡಿಸುತ್ತೇನೆ. ಸೆಪ್ಟೆಂಬರ್​ನಲ್ಲಿ ಸ್ಲೊವೇನಿಯಾದಲ್ಲಿ ನಿಗದಿಯಾಗಿರುವ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲು ನಾನು ತಯಾರಿಸುತ್ತಿರುವ ಸಿನಿಮಾದಲ್ಲಿ ಆ ತುಣುಕನ್ನೂ ಸೇರಿಸುತ್ತೇನೆ ಎಂದು ಡೌನಿ ಹೇಳಿದ್ದಾರೆ.

ತನಿಖೆ ನಡೆಯುತ್ತಿದೆ. ತನಿಖೆಗೆ ತೊಡಕು ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆಯ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸೆವ್ನಿಕಾದ ಪೊಲೀಸ್​ ವಕ್ತಾರೆ ಅಲೆಂಕಾ ಡ್ರೆನಿಕ್​ ತಿಳಿಸಿದ್ದಾರೆ.

ಸ್ಲೊವೇನಿಯಾದಲ್ಲಿ ಜನಾಂಗೀಯ ನಿಂದನೆ ವಿರುದ್ಧ ಭಾರಿ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆ ರಾಷ್ಟ್ರದಲ್ಲಿರುವ ಜೀತಪದ್ಧತಿಯೊಂದಿಗೆ ಹೆಸರು ತಳಕು ಹಾಕಿಕೊಂಡಿರುವ ಅಮೆರಿಕದ ಮುಖಂಡರ ಸ್ಮಾರಕಗಳನ್ನು ತೆಗೆದುಹಾಕುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಮೆಲೇನಿಯಾ ಟ್ರಂಪ್​ ಅವರ ಮರದ ಪ್ರತಿಮೆಯನ್ನು ಸುಟ್ಟಹಾಕಿರುವುದು ಗಮನಾರ್ಹವಾಗಿದೆ.

ಜುಲೈ 4 ಸ್ವಾತಂತ್ರ್ಯೋತ್ಸವ ಭಾಷಣ ಸೇರಿ ಇತ್ತೀಚೆಗೆ ತಾವು ಮಾಡಿದ ಹಲವು ಭಾಷಣಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೂರ್ತಿಗಳನ್ನು ಭಗ್ನಗೊಳಿಸುವ ಅಥವಾ ಅದನ್ನು ತೆಗೆದುಹಾಕುವ ಕ್ರಮದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದರ ಬೆನ್ನಲ್ಲೇ ಮೆಲೇನಿಯಾ ಟ್ರಂಪ್​ ಅವರ ಮರದ ಪ್ರತಿಮೆಯನ್ನು ಸುಟ್ಟುಹಾಕಲಾಗಿದೆ.

ಪ್ರವಾಸಿತಾಣ ಸೆವ್ನಿಕಾ: ಸೆವ್ನಿಕಾದಲ್ಲಿ ಅಂಥ ಆಕರ್ಷಣೀಯವಾದ ತಾಣಗಳು ಯಾವುದೂ ಇಲ್ಲ. ಆದರೂ ಅದು ಇತ್ತೀಚಿನ ದಿನಗಳಲ್ಲಿ ಪ್ರವಾಸಿತಾಣವಾಗಿ ಮಾರ್ಪಡುತ್ತಿದೆ. ಡೊನಾಲ್ಡ್​ ಟ್ರಂಪ್​ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರದಲ್ಲಿ ಅವರ ಪತ್ನಿ ಮೆಲೇನಿಯಾ ಟ್ರಂಪ್​ ಅವರ ತವರು ಇದಾಗಿರುವುದು ಅದಕ್ಕೆ ಕಾರಣ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಮೆಲೇನಿಯಾ ಅವರ ಆರಂಭಿಕ ದಿನಗಳ ಬಗ್ಗೆ ಸಿಗಬಹುದಾದ ಮಾಹಿತಿ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಎನ್ನಲಾಗಿದೆ.