ನ್ಯೂಸ್

ನಟ ದರ್ಶನ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೆಗಾಸ್ಟಾರ್? ಇಲ್ಲಿದೆ ಅಸಲಿ ಸಂಗತಿ!

ಬೆಂಗಳೂರು: ಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್​ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಕಾಟೇರ' ಚಿತ್ರವು ಇದೇ ಡಿ.29ರಂದು ತೆರೆಗೆ ಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬಹುತೇಕ ಚಿತ್ರಮಂದಿಗರಳಲ್ಲಿ ಭರ್ಜರಿ ಓಪನಿಂಗ್ ಪಡೆಯುವ ಮುಖೇನ ಬಾಕ್ಸ್​ ಆಫೀಸ್​ ಧೂಳಿಪಟ ಮಾಡಲು ಸಜ್ಜಾಗಿದೆ. ಸದ್ಯ ಈ ಚಿತ್ರ ಬಿಡುಗಡೆಗೂ ಮುನ್ನವೇ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಷ್ಟಕ್ಕೂ ಏನದು? ಇದು ವದಂತಿಯೋ ಅಥವಾ ಅಸಲಿ ಸಂಗತಿಯೋ? ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಚಿತ್ರರಂಗದ ನಿರ್ದೇಶಕ ಪ್ರೇಮ್​ ನಿರ್ದೇಶನದಲ್ಲಿ ಮೂಡಿಬರಲಿರುವ ಹೊಸ ಸಿನಿಮಾದಲ್ಲಿ ದರ್ಶನ್​ ಅಭಿನಯಿಸುತ್ತಿದ್ದು. ಈ ಚಿತ್ರಕ್ಕೆ ಟಾಲಿವುಡ್​ನ ಸ್ಟಾರ್​ ನಟರೊಬ್ಬರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಿನಿ ವರದಿಗಳು ಹೇಳುತ್ತಿವೆ. ಈ ಹಿಂದೆ ದರ್ಶನ್​ ಜತೆಗೆ 'ಕರಿಯ' ಸಿನಿಮಾವನ್ನು ಮಾಡಿದ್ದ ಪ್ರೇಮ್, ಇದೀಗ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ದರ್ಶನ್​-ಪ್ರೇಮ್​ ಅವರ ಕಾಂಬಿನೇಷನ್​ ಅನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಬಹುದಾಗಿದೆ.

ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್​ ಅಭಿನಯಿಸುತ್ತಿದ್ದು, ಟಾಲಿವುಡ್​ನ ಮೆಗಾಸ್ಟಾರ್​, ನಟ ಚಿರಂಜೀವಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಬಲವಾದ ಕಾರಣ, ಇತ್ತೀಚೆಗಷ್ಟೇ ಪ್ರೇಮ್​ ಹೈದರಾಬಾದ್​ಗೆ ತೆರಳಿ, ಚಿರಂಜೀವಿ ಅವರಿಗೆ ಕಥೆ ವಿವರಿಸಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರತಂಡ ಮೆಗಾಸ್ಟಾರ್​ ಅವರ ಒಪ್ಪಿಗೆ ನಿರೀಕ್ಷಿಸುತ್ತಿದ್ದು, ಮುಂದಿನ ವರ್ಷ ಜೂನ್​ 2024ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).