ನ್ಯೂಸ್

Meesho: ಈ ಕಂಪನಿಯ ಎಲ್ಲ ಉದ್ಯೋಗಿಗಳಿಗೆ 9 ದಿನ ರಜೆ! ಇ-ಕಾಮರ್ಸ್ ಕಂಪನಿ ಹಿಂದಿನ ಉದ್ದೇಶ ಇದೇ ನೋಡಿ..

ಬೆಂಗಳೂರು: ಪ್ರಮುಖ ಉದ್ದಿಮೆಗಳಲ್ಲಿ ಎಂಟು ಗಂಟೆಗೂ ಹೆಚ್ಚು ಕಾಲ ಡ್ಯೂಟಿ ಮಾಡಬೇಕೆನ್ನುತ್ತಿರುವ ಈ ಕಾಲದಲ್ಲಿ ಪ್ರಮುಖ ಇ-ಕಾಮರ್ಸ್ ಕಂಪನಿ ಮೀಶೋ(Meesho) ದೀಪಾವಳಿ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ. ಎಲ್ಲ ನೌಕರರು ವಿಶ್ರಾಂತಿ ಪಡೆದುಕೊಳ್ಳಲು ಒಂಬತ್ತು ದಿನ ರಜೆ ಘೋಷಿಸಲಾಗಿದೆ.

ಅ.26 ರಿಂದ ನ.3 ರವರೆಗೆ ನೀಡಲಾಗಿದೆ. ನಿರಂತರವಾಗಿ ಕೆಲಸದ ಒತ್ತಡದಿಂದ ಬಳಲುತ್ತಿರುವ ಉದ್ಯೋಗಿಗಳಿಗೆ ವಿಶ್ರಾಂತಿ ಪಡೆಯಲು ಹಾಗೂ ಹೊಸ ಉತ್ಸಾಹದಿಂದ ಕರ್ತವ್ಯ ಆರಂಭಿಸಲು ಈ ರಜೆಗಳನ್ನು ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ರೀಸೆಟ್ ಮತ್ತು ರೀಚಾರ್ಜ್ ಹೆಸರಿನಲ್ಲಿ ಮೀಷೋ ಈ ರಜೆಗಳನ್ನು ನೀಡಿರುವುದು ಇದು ಸತತ ನಾಲ್ಕನೇ ವರ್ಷ. ಈ ರಜಾದಿನಗಳಲ್ಲಿ ಉದ್ಯೋಗಿಗಳು ಕಂಪನಿಯಿಂದ ಯಾವುದೇ ಕೆಲಸಕ್ಕೆ ಸಂಬಂಧಿಸಿದ ಇಮೇಲ್‌ಗಳು ಅಥವಾ ಫೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಕನಿಷ್ಠ ಸಂದೇಶ, ಸಭೆಗಳ ಗೊಡವೆಯೂ ಅವರಿಗೆ ಅಗತ್ಯವಿರುವುದಿಲ್ಲ. ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯಲು ಮತ್ತು ಹೊಸ ಉತ್ಸಾಹದಿಂದ ತಮ್ಮನ್ನು ರೀಚಾರ್ಜ್ ಮಾಡಲು ಮತ್ತು ತಮ್ಮ ಕಚೇರಿಯನ್ನು ಮರೆತುಬಿಡಲು ಈ ರಜಾದಿನಗಳನ್ನು ಘೋಷಿಸಲಾಗಿದೆ.

"ನಿಮ್ಮೆಲ್ಲರ ಶ್ರಮದಿಂದಾಗಿ ಈ ವರ್ಷ ಕಂಪನಿಗೆ ಅದ್ಭುತ ವರ್ಷವಾಗಿದೆ. ನಾವು ಮೆಗಾ ಬ್ಲಾಕ್ಬಸ್ಟರ್ ಮಾರಾಟವನ್ನು ಸಹ ಪೂರ್ಣಗೊಳಿಸಿದ್ದೇವೆ. ಕೆಲ ದಿನಗಳಿಂದ ಕಚೇರಿಯನ್ನೇ ಮರೆಯುವ ಕಾಲ ಬಂದಿದೆ. ಮನಸ್ಸು ಮತ್ತು ದೇಹವನ್ನು ರೀಚಾರ್ಜ್ ಮಾಡಬೇಕು. ಮುಂದಿನ ವರ್ಷವು ಹೊಸ ಮತ್ತು ಹೆಚ್ಚು ಉತ್ಸಾಹದಿಂದ ಪ್ರಾರಂಭವಾಗಬೇಕು”ಎಂದು ಕಂಪನಿಯು ಪೋಸ್ಟ್‌ನಲ್ಲಿ ತಿಳಿಸಿದೆ.

ಕಂಪನಿಯು ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ ದೀರ್ಘಾವಧಿ ರಜೆ ಘೋಷಿಸಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕಂಪನಿಯ ಈ ನಿರ್ಧಾರವನ್ನು ಹಲವರು ಶ್ಲಾಘಿಸಿದ್ದಾರೆ. ''ಇಂದಿನ ಜಗತ್ತಿನಲ್ಲಿ ನಿರಂತರವಾಗಿ ಕೆಲಸದಲ್ಲಿ ಮಗ್ನರಾಗಿ ಕಾಲ ಕಳೆಯುವುದು ಸಾಮಾನ್ಯವಾಗಿದೆ. ಆದರೆ, ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡಿ ಉದ್ಯೋಗಿಗಳಿಗೆ ಏಕಕಾಲದಲ್ಲಿ 9 ದಿನಗಳ ರಜೆ ನೀಡಿರುವುದು ನಿಜಕ್ಕೂ ಸಂತಸ ತಂದಿದೆ’ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಂಪನಿಗಳು ತಮ್ಮ ಉದ್ಯೋಗಿಗಳ ಮೇಲೆ ಅಸಹನೀಯ ಕೆಲಸದ ಹೊರೆ ಹೊರಿಸುತ್ತಿರುವ ಇಂದಿನ ದಿನಗಳಲ್ಲಿ ಮೀಶೋ ಉತ್ತಮ ಸಂಪ್ರದಾಯವನ್ನು ಮುಂದುವರೆಸುತ್ತಿದೆ ಎಂದು ಇನ್ನೊಬ್ಬ ನೆಟಿಜನ್ ಹೇಳಿದ್ದಾರೆ. ವಿವಿಧ ಕಾಮೆಂಟ್‌ಗಳ ನಡುವೆ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.