ನವದೆಹಲಿ: ಮುಂದಿನ ವರ್ಷ ವೈದ್ಯ ಚಿಕಿತ್ಸಾ ವೆಚ್ಚಗಳು ಶೇಕಡ 5ರಿಂದ ಶೇಕಡ 10ರಷ್ಟು ದುಬಾರಿ ಆಗಲಿವೆ ಎಂಬ ಸುಳಿವನ್ನು ದೇಶದ ಮುಂಚೂಣಿ ಆಸ್ಪತ್ರೆಗಳು ನೀಡಿವೆ. ವೈದ್ಯೋಪಕರಣಗಳು ಸೇರಿ ಎಲ್ಲ ವೆಚ್ಚಗಳೂ ಏರಿಕೆ ಆಗುತ್ತಿರುವ ಕಾರಣ ಚಿಕಿತ್ಸಾ ದರಗಳನ್ನು ಏರಿಕೆ ಮಾಡಲು ಅಪೊಲೋ, ಫೋರ್ಟಿಸ್ ದೇಶದ ಮುಂಚೂಣಿಯ ಆಸ್ಪತ್ರೆ ಜಾಲಗಳು ಚಿಂತನೆ ನಡೆಸಿವೆ. ಪ್ರಸಕ್ತ ಹಣಕಾಸು ವರ್ಷದ ಕೊನೆಗೆ ಚಿಕಿತ್ಸಾ ಪ್ಯಾಕೇಜ್ ದರಗಳ ಪರಿಷ್ಕರಣೆ ನಡೆಯಲಿದೆ.
ನಮ್ಮದು ಬೃಹತ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಜಾಲವಾಗಿದ್ದರೂ, 2019ರಿಂದ ಯಾವುದೇ ದರ ಪರಿಷ್ಕರಣೆ ನಡೆದಿಲ್ಲ. ಕೋವಿಡೇತರ ಚಿಕಿತ್ಸೆಗಳ ಆದಾಯದ ಮೇಲೆ ಇದು ಪರಿಣಾಮ ಬೀರಿದೆ. ಮಾನವ ಸಂಪನ್ಮೂಲದ ಮೇಲಿನ ವೆಚ್ಚ ಮತ್ತು ಇತರೆ ಆಸ್ಪತ್ರೆ ಕಾರ್ಯಾಚರಣೆ ವೆಚ್ಚ ಕೂಡ ಹೆಚ್ಚಾಗಿದೆ. ಆದಾಗ್ಯೂ, 2019ರಲ್ಲಿ ನಿಗದಿಯಾದ ದರದಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ನಷ್ಟಕ್ಕೆ ದಾರಿ ಮಾಡಿದೆ. ಹೀಗಾಗಿ ಈ ಬಾರಿ ದರ ಪರಿಷ್ಕರಣೆ ಮಾಡಿ ಜಾರಿಗೊಳಿಸಲು ಚಿಂತನೆ ನಡೆದಿದೆ. ಆದಾಗ್ಯೂ ಪರಿಸ್ಥಿತಿ ಗಮನಿಸಿಯೇ ಸರಿಯಾದ ಸಮಯದಲ್ಲಿ ದರ ಪರಿಷ್ಕರಣೆಯನ್ನು ಆಡಳಿತ ಮಂಡಳಿ ಮಾಡಲಿದೆ ಎಂದು ಫೋರ್ಟಿಸ್ ಹೆಲ್ತ್ಕೇರ್ನ ವಕ್ತಾರ ತಿಳಿಸಿದರು.
ಸಾಮಾನ್ಯವಾಗಿ ವಾರ್ಷಿಕ ಶೇಕಡ 5 ದರ ಏರಿಕೆ ನಡೆಸುವುದು ವಾಡಿಕೆ. ಎಲ್ಲ ವೆಚ್ಚಗಳೂ ಏರಿಕೆಯಾಗಿರುವ ಕಾರಣ ಈ ಬಾರಿ ಇದು ತುಸು ಹೆಚ್ಚಾಗಬಹುದು ಎಂದು ಅಪೊಲೊ ಹಾಸ್ಪಿಟಲ್ನ ಗ್ರೂಪ್ ಚೀಫ್ ಫೈನಾನ್ಶಿಯಲ್ ಆಫೀಸರ್ ಕೃಷ್ಣನ್ ಅಖಿಲೇಶ್ವರನ್ ಹೇಳಿದರು.
ರಿಕವರಿಗೆ ಶೇ.5-6 ಕೊರತೆ: ಅಪೊಲೊ ಮತ್ತು ಫೋರ್ಟಿಸ್ ಆಸ್ಪತ್ರೆಗಳಲ್ಲಿ ವಹಿವಾಟು ಕೋವಿಡ್ ಪೂರ್ವ ಸ್ಥಿತಿಗೆ ಬರಲು ಇನ್ನೂ ಶೇಕಡ 5ರಿಂದ ಶೇಕಡ 6 ಕೊರತೆ ಇದೆ. ಆದರೆ ಆಸ್ಪತ್ರೆ ವೆಚ್ಚದ ಪ್ರಮಾಣ ಗರಿಷ್ಠ ಅಂಕಿ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆಸ್ಪತ್ರೆಗೆ ಆದಾಯ ಮಾರ್ಗಗಳು: ಆಸ್ಪತ್ರೆಗಳು ಸಾಮಾನ್ಯವಾಗಿ ಮೂರು ರೀತಿಯ ಆದಾಯಗಳನ್ನು ಹೊಂದಿವೆ. ಒಂದು ರೋಗಿಗಳು ಪಾವತಿಸುವ ಹಣ, ವಿಮಾ ಕಂಪನಿಗಳ ಮೂಲಕ ಭರಿಸಲ್ಪಡುವ ಚಿಕಿತ್ಸಾ ವೆಚ್ಚ, ಕಂಪನಿಗಳ ಮೂಲಕ ಭರಿಸಲ್ಪಡುವ ಉದ್ಯೋಗಿಗಳ ಚಿಕಿತ್ಸಾ ವೆಚ್ಚ ಅಥವಾ ಸರ್ಕಾರದ ಯೋಜನೆಗಳ ಮೂಲಕ ಭರಿಸಲ್ಪಡುವ ಚಿಕಿತ್ಸಾ ವೆಚ್ಚಗಳ ಮೂಲಕ ಆಸ್ಪತ್ರೆ ಆದಾಯ ಗಳಿಕೆಯಾಗುತ್ತದೆ. ರೋಗಿಗಳು ನೇರವಾಗಿ ಪಾವತಿಸುವ ಚಿಕಿತ್ಸಾ ದರದಲ್ಲಿ ಪರಿಷ್ಕರಣೆಯನ್ನು ಸುಲಭದಲ್ಲಿ ಮಾಡಬಹುದು. ಇದು ಆಸ್ಪತ್ರೆಯ ಆಡಳಿತ ಮಂಡಳಿಯ ತೀರ್ವನದ ಚೌಕಟ್ಟಿನಲ್ಲೇ ಇರುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.