ನ್ಯೂಸ್

ಇನ್ನು ಮುಂದೆ ರಷ್ಯಾದಲ್ಲಿ ಮ್ಯಾಕ್​ಡೊನಾಲ್ಡ್ಸ್​ಇರುವುದಿಲ್ಲ: 62 ಸಾವಿರ ಕೆಲಸಗಾರರ ಗತಿಯೇನು?

ನ್ಯೂಯಾರ್ಕ್​: ಅಮೆರಿಕನ್​ ಫಾಸ್ಟ್​​ ಫುಡ್​ ಮೆಕ್​ಡೊನಾಲ್ಡ್ಸ್​​ ರಷ್ಯಾದ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದ್ದು, ದೇಶದಲ್ಲಿ ತನ್ನ ವ್ಯವಹಾರವನ್ನು ಸ್ಥಳೀಯ ಖರೀದಿದಾರರಿಗೆ ಮಾರಾಟ ಮಾಡುತ್ತದೆ ಎಂದು ಕಂಪನಿ ಸೋಮವಾರ ತಿಳಿಸಿದೆ.

ಯೂಕ್ರೇನ್​-ರಷ್ಯಾ ಯುದ್ಧ ಬಿಕ್ಕಟ್ಟು ಇದೀಗ ದೈತ್ಯ ಕಂಪನಿ ಮೇಲೂ ಪರಿಣಾಮ ಬೀರಿದ್ದು, ರಷ್ಯಾದಿಂದ ಈಗಾಗಲೇ ಹಲವು ಉದ್ಯಮಗಳು ಕಾಲ್ಕಿತ್ತಿವೆ.

ನೆಟ್​ಫ್ಲಿಕ್ಸ್ ಹಾಗೂ ಲೆವಿ ಹೊರಬಂದಿದ್ದು, ಇದೀಗ ಮ್ಯಾಕ್​ಡೊನಾಲ್ಡ್ಸ್​​ ಕೂಡ ಮಾರುಕಟ್ಟೆಯಿಂದ ನಿರ್ಗಮಿಸಲು ನಿರ್ಧಾರ ಮಾಡಿದೆ. ಇದೇ ಸಾಲಿನಲ್ಲಿ ಕೆಎಫ್​ಸಿ ಮತ್ತು ಪಿಜಾ ಹಟ್​ ಕೂಡ ಇನ್ನು ಹೊಸ ಹೂಡಿಕೆ ಮಾಡುವುದಿಲ್ಲ ಎಂದು ಹೇಳಿದೆ.

ಪ್ರಸ್ತುತ 1000 ಕೆಎಫ್​ಸಿ ಮಳಿಗೆ ಹಾಗೂ 50ಕ್ಕೂ ಹೆಚ್ಚು ಪಿಜಾ ಹಟ್ ರೆಸ್ಟೋರೆಂಟ್​ಗಳಿದ್ದು, ಇದರ ಲಾಭವನ್ನು ಮಾನವೀಯ ದೃಷ್ಟಿಯಿಂದ ರೆಡ್​ ಕ್ರಾಸ್​ ಸಂಸ್ಥೆಗೆ ದಾನ ಮಾಡುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇನ್ನು ರಷ್ಯಾದಲ್ಲಿ ಮ್ಯಾಕ್​ಡೊನಾಲ್ಡ್ಸ್​​ 850 ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುವ 62 ಸಾವಿರ ಕೆಲಸಗಾರರ ಬಗ್ಗೆ ಸದ್ಯಕ್ಕೆ ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 30 ವರ್ಷಗಳಿಂದ ರಷ್ಯಾ ಮಾರುಕಟ್ಟೆಯಲ್ಲಿ ಮ್ಯಾಕ್​ಡೊನಾಲ್ಡ್ಸ್​​ ಕಾರ್ಯನಿರ್ವಹಿಸುತ್ತಿದೆ. (ಏಜೆನ್ಸೀಸ್​)