ನ್ಯೂಸ್

ಇಂಡಿಗೋ ವಿಮಾನದಿಂದ ‘ಮೇಡೇ’ ಸಂದೇಶ; ಇಂಧನದ ಕೊರತೆಯಿಂದ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ| indigo-flight

ಬೆಂಗಳೂರು: ಗುವಾಹಟಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ (6E 6764) ಗುರುವಾರ ಸಂಜೆ ಬೆಂಗಳೂರಿಗೆ ತುರ್ತು ಮಾರ್ಗ ಬದಲಾವಣೆ ಮಾಡಿದೆ. ಇಂಧನ ಮಟ್ಟ ತೀವ್ರವಾಗಿ ಕಡಿಮೆಯಾದ ಕಾರಣ ಪೈಲಟ್ ಅಪರೂಪದ "ಇಂಧನ ಮೇಡೇ" ಕರೆ ನೀಡಿದ ಬಳಿಕ ವಿಮಾನವನ್ನು ಬೆಂಗಳೂರಿನಲ್ಲಿ ಲ್ಯಾಂಡ್​ ಮಾಡಲಾಯಿತು ಎಂದು ಹೇಳಲಾಗಿದೆ.

ಪೈಲಟ್ ತಕ್ಷಣ ಚೆನ್ನೈ ವಾಯು ಸಂಚಾರ ನಿಯಂತ್ರಣ (ಎಟಿಸಿ) ಯನ್ನು ಸಂಪರ್ಕಿಸಿದರು. ಈ ವೇಳೆ ಸುರಕ್ಷತಾ ಕಾರಣಗಳಿಗಾಗಿ ವಿಮಾನವನ್ನು ಬೆಂಗಳೂರಿಗೆ ತಿರುಗಿಸಲು ಸೂಚಿಸಲಾಯಿತು. ಜೂನ್ 19ರಂದು ರಾತ್ರಿ 8 ಗಂಟೆ ಸುಮಾರಿಗೆ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಗುರುವಾರ ಸಂಜೆ 4.45ಕ್ಕೆ 168 ಪ್ರಯಾಣಿಕರನ್ನು ಹೊತ್ತು ಗುವಾಹಟಿಯಿಂದ ಹೊರಟ ಇಂಡಿಗೋ ವಿಮಾನ ಸಂಜೆ 7.45ರ ವೇಳೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಚೆನ್ನೈ ತಲುಪುವ ಸ್ವಲ್ಪ ಸಮಯದ ಮೊದಲು, ಪೈಲಟ್ ಇಂಧನ ಕಡಿಮೆಯಿರುವ ಬಗ್ಗೆ ಗಮನಿಸಿದರು. ಇದು ಗಮ್ಯಸ್ಥಾನದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಬಗ್ಗೆ ಕಳವಳ ಉಂಟು ಮಾಡಿತ್ತು.

ಇಂಧನದ ಪರೀಕ್ಷೆ ಮಾಡಿಕೊಳ್ಳದೆ ಹಾರಾಟಕ್ಕೆ ಮುಂದಾಗಿದ್ದಕ್ಕೆ ಆ ವಿಮಾನದ ಇಬ್ಬರು ಪೈಲಟ್​​ಗಳನ್ನೂ ಅಮಾನತುಗೊಳಿಸಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ ಇಂಡಿಗೋ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

“ಮೇಡೇ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ವಿಮಾನ ನಿಲ್ದಾಣದ ಸಿಬ್ಬಂದಿಗೆ ಎಚ್ಚರಿಕೆ ನೀಡಿತು, ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ.

ಏನಿದು 'ಮೇಡೇ'.?

(ಏಜೆನ್ಸೀಸ್)

ಎನ್ನುವುದು ಜೀವಕ್ಕೆ ಅಪಾಯಕಾರಿ ತುರ್ತು ಪರಿಸ್ಥಿತಿಯನ್ನು ತಿಳಿಸಲು ವಾಯುಯಾನ ಮತ್ತು ಸಮುದ್ರ ಕಾರ್ಯಾಚರಣೆಗಳಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಒಂದು ಸಂಕೇತವನ್ನು ಮೇಡೇ ಕರೆ ಎಂದು ಕರೆಯಲಾಗುತ್ತದೆ. ನನಗೆ ಸಹಾಯ ಮಾಡಿ ಎಂಬ ಫ್ರೆಂಚ್ ಪದದಿಂದ ಇದನ್ನು ಪಡೆಯಲಾಗಿದೆ. ಸ್ಪಷ್ಟತೆ ಮತ್ತು ತಕ್ಷಣದ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು 3 ಬಾರಿ ಪುನರಾವರ್ತಿಸಲಾಗುತ್ತದೆ. ಮೇಡೇ ಎಂದು ಪೈಲಟ್ ಘೋಷಿಸಿದರೆ ಆ ವಿಮಾನ ಅಪಾಯದಲ್ಲಿದೆ ಎಂದು ನಂಬಲಾಗುತ್ತದೆ.