ಮುಂಬೈ: ಆನ್ಲೈನ್ ವಂಚನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ನಕಲಿ ಆ್ಯಪ್ಗಳು, ಓಟಿಪಿ ಕೇಳುವುದು, ಬ್ಯಾಂಕ್ ಖಾತೆಯಲ್ಲಿನ ಹಣ ಮಾಯ ಮಾಡುವುದನ್ನು ನೋಡಿದ್ದೇವೆ. ಆದರೆ ಡೇಟಿಂಗ್ ಆಪ್‌ಗಳನ್ನು ಕೇಳಿದ್ದೀರಾ? ಹೌದು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಇವುಗಳನ್ನು ನಂಬಿ ಹೋದರೆ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಮುಖ್ಯವಾಗಿ ಹುಡುಗರೇ ಈ ಡೇಟಿಂಗ್ ವಂಚನೆಗಳಿಗೆ ಬಲಿಯಾಗಿ ತಮ್ಮ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ.
ಅಂದಹಾಗೇ ಆನ್ ಲೈನ್ ನಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಿದ ಯುವಕ ಆಕೆ ಬರುವಂತೆ ಕೇಳಿದಾಗ ಪಬ್ ಗೆ ಹೋಗಿದ್ದಾನೆ. ಬಳಿಕ 61 ಸಾವಿರ ರೂ. ಬಿಲ್ ಹಾಕಲಾಗಿತ್ತು. ಇದರಿಂದ ಏನೂ ಮಾಡಲಾಗದೆ, ಬಿಲ್ ಪಾವತಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದ್ದಾನೆ.
ಇದನ್ನೂ ಓದಿ:
ಮುಂಬೈನಲ್ಲಿ ಈ ಘಟನೆ ನಡೆದಿದೆ. ಆ ಹುಡುಗಿಯೊಂದಿಗೆ ಪಬ್ ಮಾಲೀಕ ಹಲವರನ್ನು ಬಲೆಗೆ ಬೀಳಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಗಾಡ್‌ಫಾದರ್ ಕ್ಲಬ್‌ನಲ್ಲಿ ಡೇಟಿಂಗ್ ಆ್ಯಪ್ ಹೆಸರಿನಲ್ಲಿ ಯುವತಿಯರು ಆಮಿಷವೊಡ್ಡುವ ಮೂಲಕ ಯುವಕರನ್ನು ವಂಚಿಸುವ ದೂರುಗಳು ಬರುತ್ತಿವೆ. ಯುವಕರನ್ನು ಡೇಟಿಂಗ್ ಆ್ಯಪ್‌ಗಳಲ್ಲಿ ಆಕರ್ಷಿಸಿ ಕ್ಲಬ್‌ಗಳಿಗೆ ಕರೆತಂದು ಅವರ ಜೇಬು ಖಾಲಿ ಮಾಡುತ್ತಿದ್ದಾರೆ ಎಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಕಂಡುಬಂದಿದೆ.
ವಿವಿಧ ಡೇಟಿಂಗ್ ಆಪ್ ಗಳ ಮೂಲಕ ಸುಂದರ ಹುಡುಗಿಯರನ್ನು ಯುವಕರಿಗೆ ಆಮಿಷವೊಡ್ಡುತ್ತಾರೆ. ಆ ಯುವತಿಯರು ಆ ಹೋಟೆಲ್, ಪಬ್‌ಗೆ ಹೋಗೋಣ ಎಂದೇಳಿ, ಮೊದಲಿಗೆ ತಮ್ಮ ಇಷ್ಟದ ತಿಂಡಿ, ಮದ್ಯ, ಹುಕ್ಕಾ ಇತ್ಯಾದಿ ಆರ್ಡರ್ ಮಾಡುತ್ತಾರೆ, ಇವೆಲ್ಲವೂ ದುಬಾರಿ. ಎಲ್ಲ ಆರ್ಡರ್‌ಗಳು ಮೇಜಿನ ಮೇಲಿರುವಾಗಲೇ ಬರುತ್ತೇನೆ ಎಂದು ಹೇಳಿ ಜಾಗ ಖಾಲಿ ಮಾಡುತ್ತಾರೆ.
ಬಳಿಕ ಬಿಲ್ಲು ಹುಡುಗರೇ ಕಟ್ಟಬೇಕು. ಆದರೆ ಸಾಮಾನ್ಯ ಬೆಲೆಗಿಂತ ಬಿಲ್ ಹೆಚ್ಚಾಗಿರುತ್ತದೆ. ಬಿಲ್ ಪಾವತಿಸದಿದ್ದರೆ ಒದೆ ತಿನ್ನಬೇಕಾಗುತ್ತದೆ. ಈ ಭಯ ಮತ್ತು ಅವಮಾನದ ಕಾರಣ ಯುವಕರು ಹಣ ಕೊಟ್ಟು ಬಂದಿದ್ದಾರೆ.
ಮುಂಬೈನಲ್ಲಿ ನಡೆದ ಇಂತಹ ಘಟನೆಗಳಲ್ಲಿ ಅನೇಕ ಯುವಕರು 20ಸಾವಿರ ರೂ.ನಿಂದ 60ಸಾವಿರ ರೂ. ತೆತ್ತು ಬಂದಿದ್ದಾರೆ. ಮುಂಬೈನ ಹಲವು ಕ್ಲಬ್ ಗಳು ಇದೇ ರೀತಿ ವಂಚನೆಯಲ್ಲಿ ತೊಡಗಿವೆ. ಈ ಬಿಲ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಕ್ಲಬ್ ಗಳಲ್ಲಿ ತನಿಖೆ ನಡೆಸಿದ್ದಾರೆ.
ಇದು ಮುಂಬೈನಲ್ಲಿ ಮಾತ್ರವಲ್ಲದೆ ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಹೈದರಾಬಾದ್‌ಗಳಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.