ನ್ಯೂಸ್

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಭಾರಿ ಭೂಕುಸಿತ; ಮೂವರು ಸಾವು, ಮುಂದುವರೆದ ರಕ್ಷಣಾ ಕಾರ್ಯ| landslide

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಂಡಿ ಜಿಲ್ಲೆಯ ನಿಹ್ರಿ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಮಂಡಿಯ ಎಸ್​ಪಿ ಸಾಕ್ಷಿ ವರ್ಮಾ ಮಾತನಾಡಿದ್ದು, ಪಕ್ಕದ ಬಂಡೆಯ ಅವಶೇಷಗಳು ಮನೆಯ ಮೇಲೆ ಬಿದ್ದ ಪರಿಣಾಮ, ಮನೆ ಕುಸಿದಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮುಂದುವರೆಸಿವೆ ಎಂದು ಹೇಳಿದ್ದಾರೆ. ಮಂಡಿಯಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವಾರು ವಾಹನಗಳು ಹಾನಿಗೊಳಗಾಗಿವೆ.

ಉಕ್ಕಿ ಹರಿದ ಸೋನ್ ಖಾದ್ ನದಿ

ಈ ಬಗ್ಗೆ ಡಿಸಿಪಿ ಧರ್ಮಪುರ ಮಂಡಿ ಪ್ರತಿಕ್ರಿಯಿಸಿದ್ದು, ಸೋನ್ ಖಾದ್ ನದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಬಿರುಸಿನ ಸ್ವರೂಪ ಪಡೆದುಕೊಂಡಿತು. ಇದರಿಂದಾಗಿ ಧರ್ಮಪುರ ಪಟ್ಟಣವು ಹೆಚ್ಚು ಹಾನಿಗೊಳಗಾಯಿತು. ಮಧ್ಯರಾತ್ರಿಯ ಸುಮಾರಿಗೆ ಪ್ರವಾಹದ ನೀರು ಬಸ್ ನಿಲ್ದಾಣಕ್ಕೆ ನುಗ್ಗಿದ ಪರಿಣಾಮ, ಹಲವಾರು ಸರ್ಕಾರಿ ಬಸ್ಸುಗಳು ಮುಳುಗಿ ಕಾರುಗಳು, ಬೈಕ್‌ಗಳು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಹೇಳಿದ್ದಾರೆ. ಪ್ರವಾಹದಿಂದಾಗಿ ಅನೇಕ ಮನೆಗಳು ಮತ್ತು ಅಂಗಡಿಗಳಿಗೆ ಅವಶೇಷಗಳು ನುಗ್ಗಿವೆ ಮತ್ತು ವಾಹನಗಳಿಗೆ ವ್ಯಾಪಕ ಹಾನಿಯಾಗಿದೆ. ಸೋನ್ ಖಾದ್ ನದಿಯ ನೀರಿನ ಮಟ್ಟ ಈಗ ಕಡಿಮೆಯಾಗುತ್ತಿದ್ದು, ಪೊಲೀಸರು ಮತ್ತು ಆಡಳಿತವು ಪರಿಸ್ಥಿತಿಯನ್ನು ಹತೋಟಿಗೆ ತರುವ ಕೆಲಸ ಮುಂದುವರೆಸಿದ್ದಾರೆ.

(ಏಜೆನ್ಸೀಸ್)

ಹಿಮಾಚಲ ಪ್ರದೇಶದಲ್ಲಿ ಜೂನ್ 20 ರಿಂದ ಮಳೆಯಿಂದಾಗಿ ಸಂಭವಿಸಿದ ಭೀಕರ ಮಳೆಯಿಂದಾಗಿ 404 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ನಿನ್ನೆ (ಸೆ.15) ದೃಢಪಡಿಸಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ 229 ಸಾವುಗಳು ಮತ್ತು ರಸ್ತೆ ಅಪಘಾತಗಳಲ್ಲಿ 175 ಸಾವುಗಳು ಸಂಭವಿಸಿವೆ ಎಂದು ಎಸ್‌ಡಿಎಂಎ ವರದಿ ಮಾಹಿತಿ ನೀಡಿದೆ.

ಘಟನಾ ಸ್ಥಳದಲ್ಲಿ ಡಿಎಸ್​ಪಿ ಸಂಜೀವ್ ಸೂದ್ ನೇತೃತ್ವದ ಪೊಲೀಸರು ಮತ್ತು ರಕ್ಷಣಾ ತಂಡಗಳು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಹೆಚ್ಚಿನ ಪ್ರವಾಹದಿಂದ ನದಿ ದಂಡೆಯ ಬಳಿಯ ಮನೆಗಳು ಮತ್ತು ಅಂಗಡಿಗಳು ನೀರಿನಿಂದ ಆವೃತವಾಗಿದ್ದವು. ಸ್ಥಳೀಯ ನಿವಾಸಿಗಳು ಸುರಕ್ಷತೆಗಾಗಿ ಛಾವಣಿಗಳ ಮೇಲೆ ಹತ್ತಬೇಕಾಯಿತು. ಸುಮಾರು 150 ವಿದ್ಯಾರ್ಥಿಗಳು ವಾಸಿಸುತ್ತಿದ್ದ ಹಾಸ್ಟೆಲ್ ಕೂಡ ಪ್ರವಾಹಕ್ಕೆ ಸಿಲುಕಿತ್ತು. ಆದರೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ರಕ್ಷಣೆಗಾಗಿ ಮೇಲಿನ ಮಹಡಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.