ನೇಪಾಳ: ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ಹಾನಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ನೇಪಾಳದ ದೂರದ ಭಾಗದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ ನಂತರ, ಇಂದು ಮುಂಜಾನೆ 5 ಗಂಟೆಯ ಹೊತ್ತಿಗೆ ಕನಿಷ್ಠ 128 ಜನರು ಸಾವನ್ನಪ್ಪಿದ್ದಾರೆ. ಈ ವೇಳೆ ಭಾರತದ ಪ್ರಧಾನಿ ಮೋದಿ ನೇಪಾಳದ ಜನತೆಯ ಪರವಾಗಿ ಭಾರತ ನಿಂತಿದೆ ಎಂದು ಹೇಳಿದ್ದಾರೆ.
"ನೇಪಾಳದಲ್ಲಿ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ಹಾನಿಯಿಂದ ತೀವ್ರ ದುಃಖವಾಗಿದೆ. ಭಾರತ ನೇಪಾಳದ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧವಾಗಿದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪ ತಿಳಿಸುತ್ತೇವೆ. ಗಾಯಾಳುಗಳಿಗೆ ಶೀಘ್ರ ಚೇತರಿಸಿಕೊಳ್ಳಲು ನಾವು ಹಾರೈಸುತ್ತೇವೆ’’ ಎಂದು ಮೋದಿ ಅವರು ತಿಳಿಸಿದ್ದಾರೆ.
ಶುಕ್ರವಾರ 18.02 ಸಮಯಕ್ಕೆ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಭೂಕಂಪನದ ಪರಿಣಾಮ ಉಂಟಾಗಿದೆ. ಜಾಜರ್‌ಕೋಟ್‌ನ ಹೃದಯ ಭಾಗದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಜಜರ್‌ಕೋಟ್‌ನಲ್ಲಿ ಕನಿಷ್ಠ 92 ಜನರು ಸಾವನ್ನಪ್ಪಿದ್ದಾರೆ, ಕರ್ನಾಲಿ ಪ್ರಾಂತ್ಯದ ರುಕ್ ವೆಸ್ಟ್ ಜಿಲ್ಲೆಯಲ್ಲಿ 36 ಜನರು ಸಾವನ್ನಪ್ಪಿದ್ದರೆ, ಜಜರ್‌ಕೋಟ್‌ನಲ್ಲಿ ಕನಿಷ್ಠ 55 ಜನರು ಗಾಯಗೊಂಡಿದ್ದಾರೆ ಮತ್ತು ರುಕ್ ವೆಸ್ಟ್‌ನಲ್ಲಿ 85 ಜನರು ಗಾಯಗೊಂಡಿದ್ದಾರೆ. ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಶನಿವಾರ ಮುಂಜಾನೆ 16 ಸದಸ್ಯರ ಸೇನಾ ವೈದ್ಯಕೀಯ ತಂಡದೊಂದಿಗೆ ಹುಡುಕಾಟ, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಪ್ರದೇಶಕ್ಕೆ ಬಂದರು.