ಟೋಕಿಯೋ : ಇಂದು ಜಪಾನ್‌ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಲ್ಲಿನ ಕಾಲಮಾನದಲ್ಲಿ ಸಂಜೆ 6.10 ರ ಸುಮಾರಿಗೆ ಈ ಕಂಪನ ವರದಿಯಾಗಿದೆ. ಈ ಪರಿಣಾಮವಾಗಿ ರಾಜಧಾನಿ ಟೋಕಿಯೋದಲ್ಲಿ ಕಟ್ಟಡಗಳು ತಲ್ಲಣಗೊಂಡಿದ್ದರೆ, ದೇಶದ ಈಶಾನ್ಯ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
7.2 ರ ತೀವ್ರತೆ ಹೊಂದಿದ್ದ ಭೂಕಂಪವು ಇಶಿನೊಮಾಕಿಯಿಂದ 34 ಕಿಲೋಮೀಟರ್ ಅಂತರದಲ್ಲಿ ಕೇಂದ್ರಿತವಾಗಿದ್ದು, 60 ಕಿಲೋಮೀಟರ್ ಆಳದಲ್ಲಿ ಸಂಭವಿಸಿತು ಎಂದು ಜಪಾನ್ ಮೀಟಿಯರಾಲಾಜಿ ಏಜೆನ್ಸಿ ಹೇಳಿದೆ.
2011 ರ ಭಾರಿ ಭೂಕಂಪ ಮತ್ತು ಸುನಾಮಿಯ ಸಂದರ್ಭದಲ್ಲಿ ಅತಿಹೆಚ್ಚು ಹಾನಿಗೊಳಗಾದ ಮಿಯಾಗಿ ಪ್ರಿಫಿಕ್ಚರ್ ಪ್ರಾಂತ್ಯದ ಕರಾವಳಿಯಿಂದ ಸ್ವಲ್ಪ ದೂರದಲ್ಲೇ ಕಂಪನದ ಎಪಿಸೆಂಟರ್ ಕಂಡುಬಂದಿರುವುದಾಗಿ ಕ್ಯೋಡೋ ನ್ಯೂಸ್ ಏಜೆನ್ಸಿ ತಿಳಿಸಿದೆ. ಬಾಧಿತ ಪ್ರದೇಶದಲ್ಲಿರುವ ಒನಗಾವ ಅಣುವಿದ್ಯುತ್ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪರಿವೀಕ್ಷಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)