Bomb blast: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಮಂಗಳವಾರ(ಸೆ. 30) ಮಧ್ಯಾಹ್ನದ ಸುಮಾರಿಗೆ ಭಾರಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲೇ 10 ಮಂದಿ ಮೃತಪಟ್ಟಿದ್ದು, 32ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬ್ಲಾಸ್ಟ್ ಆಗುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಕ್ವೆಟ್ಟಾದ ಜರ್ಘುನ್ ರಸ್ತೆಯಲ್ಲಿರುವ ಎಫ್‌ಸಿ (ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ) ಪ್ರಧಾನ ಕಚೇರಿಯ ಮೂಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸ್ಪೋಟದ ಬಳಿಕ ಅದೇ ಪ್ರದೇಶದಲ್ಲಿ ಗುಂಡಿನ ದಾಳಿ ಸದ್ದು ಕೇಳಿ ಬಂದಿದೆ. ಸ್ಥಳೀಯ ನಿವಾಸಿಗಳಲ್ಲಿ ಭೀತಿ ಉಂಟಾಗಿದೆ. ಸ್ಥಳಕ್ಕೆ ರಕ್ಷಣಾ ತಂಡ ಮತ್ತು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನದ ಆಜ್ ನ್ಯೂಸ್ ವರದಿ ಮಾಡಿದೆ.
ಕ್ವೆಟ್ಟಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಬಲೋಚ್ ಮಾಹಿತಿ ನೀಡಿದ್ದು, ಸ್ಫೋಟಕ ತುಂಬಿದ ವಾಹನವು ಮಾಡೆಲ್ ಟೌನ್‌ನಿಂದ ಎಫ್‌ಸಿ ಪ್ರಧಾನ ಕಚೇರಿಯ ಬಳಿಯ ಹಾಲಿ ರಸ್ತೆಯ ಕಡೆಗೆ ತಿರುಗಿದಾಗ ಸ್ಫೋಟ ಸಂಭವಿಸಿದೆ. ನಗರದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)