ನ್ಯೂಸ್

65 ಲಕ್ಷ ರೂ. ಸಾಲ... ಆರೋಪಿ ಅಫಾನ್​ ಹೇಳಿಕೆ ಗೊಂದಲಮಯ! ಅಪ್ಪ-ಮಗನ ಮುಖಾಮುಖಿ ವಿಚಾರಣೆಗೆ ಖಾಕಿ ಸಜ್ಜು | Mass Murder

Kerala Mass Murder: ಕೇರಳದ ತಿರುವನಂತಪುರಂನಲ್ಲಿ ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೇಯಸಿ ಸೇರಿದಂತೆ ಕುಟುಂಬದ ಐವರನ್ನು 23 ವರ್ಷದ ಅಫಾನ್​ ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆ ಇಂದಿಗೂ ಸ್ಥಳೀಯರ ನಿದ್ದೆಯನ್ನೇ ಕೆಡಿಸಿದೆ. ಈ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿ ಅಫಾನ್ ಮತ್ತು ಆತನ ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಹತ್ಯಾಕಾಂಡ ಪ್ರಕರಣದ ಆರೋಪಿ ಅಫಾನ್‌ನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅಫಾನ್​ ಈ ತಿಂಗಳ 8ರವರೆಗೆ ಕಸ್ಟಡಿಯಲ್ಲಿರಿಸುವಂತೆ ಪೊಲೀಸರು ಮಾಡಿದ್ದ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿತು. ಪ್ರಸ್ತುತ ಆರೋಪಿ ಯುವಕನನ್ನು ಹೆಚ್ಚಿನ ವಿಚಾರಣೆಗಾಗಿ ಪಾಂಗೋಡ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇಂದು ಸಂಜೆಯವರೆಗೆ ವಿಚಾರಣೆ ಮುಂದುವರಿಯಲಿದ್ದು, ನಾಳೆ ಸಾಕ್ಷ್ಯ ಸಂಗ್ರಹ ನಡೆಸಲಾಗುವುದು ಎಂದು ವರದಿಯಾಗಿದೆ.

ಕುಟುಂಬದ ಆರ್ಥಿಕ ಬಾಧ್ಯತೆಗಳ ಕುರಿತು ಅಫಾನ್ ಮತ್ತು ಆತನ ತಂದೆ ಅಬ್ದುಲ್ ರಹೀಮ್ ನೀಡಿರುವ ಒಂದಷ್ಟು ಹೇಳಿಕೆಗಳು ಪ್ರಸ್ತುತ ತನಿಖಾ ಅಧಿಕಾರಿಗಳನ್ನು ಗೊಂದಲಕ್ಕೀಡಾಗಿಸಿದೆ. ತನ್ನ ಕುಟುಂಬ 65 ಲಕ್ಷ ರೂ. ಸಾಲವನ್ನು ಮಾಡಿಕೊಂಡಿತ್ತು ಎಂದು ಅಫಾನ್​ ಹೇಳಿಕೊಂಡಿದ್ದಾನೆ. ಆದರೆ, ಈ ಬಗ್ಗೆ ತಂದೆ ಬಳಿ ಕೇಳಿದಾಗ, ನಾನು ವಿದೇಶದಲ್ಲಿ ಉಳಿದುಕೊಂಡಿದ್ದೆ. ಕುಟುಂಬದ ಆರ್ಥಿಕ ಸಮಸ್ಯೆಗಳ ಕುರಿತಂತೆ ನನಗೆ ಏನೂ ಗೊತ್ತಿಲ್ಲ. ವಿದೇಶದಲ್ಲಿ ನಾನು ಕೇವಲ 15 ಲಕ್ಷ ರೂ. ಸಾಲವನ್ನು ಮಾಡಿಕೊಂಡಿದ್ದೆ ಎಂದು ರಹೀಮ್​ ಹೇಳಿದ್ದಾರೆ. ಇಬ್ಬರ ಹೇಳಿಕೆಗಳಲ್ಲಿನ ವ್ಯತ್ಯಾಸ ಪೊಲೀಸರಲ್ಲಿ ಗೊಂದಲ ಹುಟ್ಟುಹಾಕಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಳ್ಳಲು ಮುಂದಾಗಿದ್ದು, ನಾಳೆ ಅಫಾನ್ ಮತ್ತು ತಂದೆ ರಹೀಮ್​ರನ್ನು ಮುಖಾಮುಖಿ ಕೂರಿಸಿ ವಿಚಾರಣೆ ಮಾಡುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).