ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಲಿ

vat
Published on

 ರಾಮನಗರ : ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಕನ್ನಡದಲ್ಲಿಯೇ ಮಾತನಾಡಬೇಕೆಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಕನ್ನಡಪರ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮೂಲಕ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಕಳೆದ ಮೂರು ವರ್ಷಗಳಿಂದ ಜಂಟಿ ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಕರ್ನಾಟಕದ ರಾಜ್ಯಪಾಲರು ಕನ್ನಡದಲ್ಲಿಯೇ ಮಾತನಾಡಬೇಕು. ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಮಾತನಾಡಿರುವುದು ವಿರೋಧಕ್ಕೆ ಗುರಿಯಾಗಿದೆ. ಈ ನಡೆ ವಿರೋಧಿಸಿ ಕಪ್ಪುಬಾವುಟ ಪ್ರದರ್ಶಿಸಿ ಕರಾಳದಿನ ಆಚರಣೆ ಮಾಡುತ್ತೇವೆ ಎಂದರು.

ಮಾ.22ರಂದು ಕರ್ನಾಟಕ ಬಂದ್ ಮಾಡುತ್ತೇವೆ. ಈಗಾಗಲೇ ಬಂದ್‌ಗೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 2ಸಾವಿರಕ್ಕೂ ಅಧಿಕ ಮಂದಿ ಅಖಂಡ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ತಮಿಳುನಾಡು ಧೋರಣೆ ವಿರೋಧಿಸಿ ಹಾಗೂ ಮೇಕೆದಾಟಿಗೆ ಬೆಂಬಲ ಸೂಚಿಸಿ ಮಾ. 8ರಂದು ಅತ್ತಿಬೆಲೆ ಬಂದ್ ಮಾಡುವ ಮೂಲಕ ಹೋರಾಟ ಮಾಡಲಾಗುತ್ತದೆ. ಮಾ.10ರಂದು ಬೆಳಗಾವಿಯಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು.

ರಾಜ್ಯದ ಚಾಲರಿಗೆ ಮರಾಠಿಗರು ಹಲ್ಲೆ ಮಾಡಿ ಅಪಮಾನ ಮಾಡಿದ್ದಾರೆ. ಇದು ರಾಜ್ಯದ ಚಾಲಕರಿಗೆ ಆದ ಅಪಮಾನ ಎಂದು ತಿಳಿಸಿದರು.

ಮುಖಂಡರಾದ ಕೆ. ಜಯರಾಮ, ಕೆಂಪರಾಜು, ಪಾರ್ಥಸಾರಥಿ, ಕುಮಾರ್, ಬಿಡದಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ಪ್ರಸನ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net