Tunnel : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದ ಒಳಗೆ ಮಾವೋವಾದಿಗಳ ಸುರಂಗ ಪತ್ತೆಯಾಗಿದ್ದು, ಅದರೊಳಗಿದ್ದ ವಸ್ತುಗಳನ್ನು ನೋಡಿ ಯೋಧರೇ ಒಂದು ಕ್ಷಣ ದಂಗಾಗಿದ್ದಾರೆ. ಸುಕ್ಮಾ-ಬಿಜಾಪುರ್ ಗಡಿಯಲ್ಲಿ ಪರಿಶೀಲನೆ ಮಾಡುವಾಗ ಡಿಆರ್‌ಜಿ ಯೋಧರು ಈ ಸುರಂಗವನ್ನು ಪತ್ತೆಹಚ್ಚಿದ್ದಾರೆ.
ಬಾಂಬ್ ತಯಾರಿಸಲು ಬಳಸುವ ವಸ್ತುಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ. ಮಾವೋವಾದಿಗಳು ಛತ್ತೀಸ್‌ಗಢದ ತುಮ್ರೆಲ್ ಮತ್ತು ಟಾಲ್ಪರ್ ನದಿಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಈ ಸುರಂಗವನ್ನು ನಿರ್ಮಾಣ ಮಾಡಿದ್ದರು. ಮಾವೋವಾದಿ ಪೀಡಿತ ಬಿಜಾಪುರದಲ್ಲಿ 12 ಮಾವೋವಾದಿಗಳನ್ನು ಕೊಂದು ಬೃಹತ್ ಕಾರ್ಯಾಚರಣೆಯಿಂದ ಹಿಂತಿರುಗುತ್ತಿದ್ದ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಪಡೆಗಳು, ಮಾವೋವಾದಿಗಳ ಅಡಗುತಾಣವನ್ನು ಪತ್ತೆಹಚ್ಚಿದ್ದಾರೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿ, ಹೊಂಚುದಾಳಿಗಳಿಗೆ ವೇದಿಕೆಯಾಗಿ ಬಳಸುತ್ತಿರುವ ಆಳವಾದ, ಉದ್ದ ಮತ್ತು ಕಿರಿದಾದ ಸುರಂಗ ಪತ್ತೆಯಾಗಿದೆ.
ಮಾವೋವಾದಿ ಬಂಕರ್‌ನ ನಿಖರವಾದ ಅಳತೆ ತಕ್ಷಣಕ್ಕೆ ತಿಳಿದಿಲ್ಲವಾದರೂ, ಸ್ಫೋಟಕಗಳು, ಯಂತ್ರಗಳು, ಜನರೇಟರ್‌ಗಳು ಮತ್ತು ಪೈಪ್‌ಗಳ ಬೃಹತ್ ರಾಶಿಯ ನಡುವೆ 5 ರಿಂದ 6 ಜನರು ಚಲಿಸುವಷ್ಟು ದೊಡ್ಡದಾಗಿತ್ತೆಂದು ತಿಳಿದುಬಂದಿದೆ.
ಅಂದಹಾಗೆ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲು ಪ್ರತಿದಾಳಿ ಮತ್ತು ಕೋಂಬಿಂಗ್ ಪ್ರಕ್ರಿಯೆ ಛತ್ತೀಸ್ಗಢದಲ್ಲಿ ವೇಗವಾಗಿ ಮುಂದುವರೆದಿದೆ. ಈ ಕಾರ್ಯಾಚರಣೆಯ ಭಾಗವಾಗಿ ದೊಡ್ಡ ಪ್ರಮಾಣದಲ್ಲಿ ಮಾವೋವಾದಿಗಳನ್ನು ಹೊಡೆದುರುಳಿಸಲಾಗುತ್ತಿದೆ. ಅದೇ ರೀತಿ ಯೋಧರನ್ನು ಎದುರಿಸಲು ಮಾವೋವಾದಿಗಳು ಹೊಸ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಸುಕ್ಮಾ ಮತ್ತು ಬಿಜಾಪುರ್ ಬಳಿಯ ಟುಮ್ರೆಲ್ ಮತ್ತು ಟಾಲ್ಪರ್ ನದಿ ಜಲಾನಯನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಸುರಂಗವನ್ನು ಮಾವೋವಾದಿಗಳು ಸ್ಥಾಪಿಸಿದ್ದಾರೆ.
ಸುರಂಗದ ಒಳಗೆ ಬಾಂಬ್‌ಗಳು ಮತ್ತು ಐಇಡಿಗಳನ್ನು ತಯಾರಿಸಲು ಬೇಕಾದ ದೊಡ್ಡ ಪ್ರಮಾಣದ ವಸ್ತುಗಳನ್ನು (ಕಬ್ಬಿಣದ ತಂತಿ, ಬಾಟಲಿಗಳು) ಅಡಗಿಸಿಟ್ಟಿರುವುದನ್ನು ಸೈನಿಕರು ಪತ್ತೆಹಚ್ಚಿದ್ದಾರೆ. ಮಾವೋವಾದಿಗಳು ಹಲವು ಮೀಟರ್ ಉದ್ದದ ಸುರಂಗವನ್ನು ನಿರ್ಮಿಸಿದ್ದಾರೆ. ಯೋಧರ ಶೋಧ ಕಾರ್ಯ ತ್ವರಿತಗತಿಯಲ್ಲಿ ಮುಂದುವರಿದಿದ್ದು, ಇತ್ತ ಮಾವೋವಾದಿಗಳು ಬಂಕರ್‌ಗಳನ್ನು ಸ್ಥಾಪಿಸಿ ಅವುಗಳಲ್ಲಿ ಅಡಗಿಕೊಳ್ಳುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)