ನ್ಯೂಸ್

ಭದ್ರತಾ ಪಡೆಗಳ ಶ್ರಮದಿಂದ ಉಗ್ರವಾದದ ಪಿಡುಗು ಶೀಘ್ರದಲ್ಲೇ ದೂರ : ಕೇಂದ್ರ ರಕ್ಷಣಾ ಸಚಿವ Rajnath Singh

Delhi: ಪೊಲೀಸ್ ಮತ್ತು ಭದ್ರತಾ ಪಡೆಗಳ ಅವಿರತ ಶ್ರಮದಿಂದಾಗಿ ಎಡಪಂಥೀಯ ಉಗ್ರವಾದದ ಪಿಡುಗು ಶೀಘ್ರದಲ್ಲೇ ಭಾರತದಿಂದ ದೂರವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ಶ್ರೀ(Rajnath Singh) ಮಂಗಳವಾರ (ಅಕ್ಟೋಬರ್ 21) ಹೇಳಿದ್ದಾರೆ.

ದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಗೌರವ ನಮನ ಸಲ್ಲಿಸಿ ಮಾತನಾಡಿದ ಸಚಿವ ಸಿಂಗ್​, ಒಂದು ಕಾಲದಲ್ಲಿ ರಾಜ್ಯದ ವಿರುದ್ಧ ಶಸ್ತ್ರಾಸ್ತ್ರ ಹಿಡಿದಿದ್ದ ಮಾವೋವಾದಿಗಳು ಇಂದು ಶರಣಾಗುತ್ತಿದ್ದಾರೆ ಮತ್ತು ಅಭಿವೃದ್ಧಿಯ ಮುಖ್ಯವಾಹಿನಿಗೆ ತಮ್ಮನ್ನು ತಾವು ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಅಂಶದಿಂದ ನಕ್ಸಲರ ವಿರುದ್ಧದ ಅಭಿಯಾನದ ಯಶಸ್ಸನ್ನು ನಾವು ನಿರ್ಣಯಿಸಬಹುದು, ಭದ್ರತಾ ಪಡೆಗಳ ಅವಿಶ್ರಾಂತ ಪ್ರಯತ್ನಗಳಿಂದಾಗಿ, ಈ ಸಮಸ್ಯೆ ಈಗ ಇತಿಹಾಸವಾಗುವ ಅಂಚಿನಲ್ಲಿದೆ. ಇದಕ್ಕಾಗಿ ನಮ್ಮ ಎಲ್ಲಾ ಭದ್ರತಾ ಸಿಬ್ಬಂದಿ ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.

ಅನೇಕ ವರ್ಷಗಳಿಂದ ನಕ್ಸಲಿಸಂ ನಮ್ಮ ಆಂತರಿಕ ಭದ್ರತೆಗೆ ದೊಡ್ಡ ಸಮಸ್ಯೆಯಾಗಿದೆ. ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಅನೇಕ ಜಿಲ್ಲೆಗಳು ನಕ್ಸಲಿಸಂನಿಂದ ಪ್ರಭಾವಿತವಾಗಿದ್ದ ಕಾಲವಿತ್ತು. ಇದರಿಂದಾಗಿ ಹಳ್ಳಿಗಳಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದವು, ಜನರು ಭಯದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು. ಈ ಸಮಸ್ಯೆ ಇನ್ನು ಮುಂದೆ ಮುಂದುವರಿಯಲು ಬಿಡಬಾರದು, ನಮ್ಮ ಪೊಲೀಸರು, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಸ್ಥಳೀಯ ಆಡಳಿತವು ಸಂಘಟಿತ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ ರೀತಿ ಶ್ಲಾಘನೀಯ ಎಂದರು.

ಒಂದು ಕಾಲದಲ್ಲಿ ನಕ್ಸಲ್ ಕೇಂದ್ರವಾಗಿದ್ದ ಪ್ರದೇಶಗಳು ಈಗ ಶೈಕ್ಷಣಿಕ ಕೇಂದ್ರಗಳಾಗಿ ಬದಲಾಗುತ್ತಿವೆ, ಒಂದು ಕಾಲದಲ್ಲಿ ಕೆಂಪು ಕಾರಿಡಾರ್ ಎಂದು ಕುಖ್ಯಾತಿ ಪಡೆದಿದ್ದ ಭಾರತದ ಭಾಗಗಳು ಈಗ ಅಭಿವೃದ್ದಿಯ ಕಾರಿಡಾರ್ ಆಗಿ ಪರಿವರ್ತನೆಯಾಗಿವೆ, ನಮ್ಮ ಸರ್ಕಾರವು ಇಂತಹ ಬದಲಾವಣೆಗಳನ್ನು ತರಲು ಸಾಧ್ಯವಾಗಿದೆ ಮತ್ತು ಹೀಗೆ ಬದಲಾಗಲು ಪೊಲೀಸರು ಮತ್ತು ಭದ್ರತಾ ಪಡೆಗಳು ಬಹಳ ಮಹತ್ವದ ಕೊಡುಗೆಯನ್ನು ನೀಡಿವೆ ಎಂದರು.

ಪೊಲೀಸ್ ಪಡೆಗಳ ಆಧುನೀಕರಣಕ್ಕಾಗಿ ಮೋದಿ ಸರ್ಕಾರ ಒದಗಿಸುತ್ತಿರುವ ಸಂಪನ್ಮೂಲಗಳು ಮತ್ತು ಬಜೆಟ್ ಬಗ್ಗೆಯೂ ಸಚಿವರು ಮಾತನಾಡಿದ್ದು, ಈ ಸೀಮಿತ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದರು. ವಿವಿಧ ಭದ್ರತಾ ಸಂಸ್ಥೆಗಳ ಸಮನ್ವಯ ಮತ್ತು ಏಕೀಕರಣದ ಮೂಲಕ ಇದನ್ನು ಸಾಧಿಸಬಹುದು ಎಂದು ಹೇಳಿದರು. ಪ್ರಸ್ತುತ ಕಾಲದಲ್ಲಿ ಪೊಲೀಸರು ಅಪರಾಧದ ವಿರುದ್ಧ ಹೋರಾಡುವುದಲ್ಲದೆ, ಗ್ರಹಿಕೆಯ ವಿರುದ್ಧವೂ ಹೋರಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

1959 ರ ಅಕ್ಟೋಬರ್ 21 ರಂದು ಲಡಾಖ್‌ನ ಹಾಟ್ ಸ್ಪ್ರಿಂಗ್ ಪ್ರದೇಶದಲ್ಲಿ ಚೀನಾದ ಪಡೆಗಳ ಹೊಂಚುದಾಳಿಯಲ್ಲಿ ಸಾವನ್ನಪ್ಪಿದ 10 ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಗಳ ನೆನಪಿಗಾಗಿ ಪ್ರತಿ ವರ್ಷ ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಗುತ್ತದೆ. ಮಾರ್ಚ್ 2026 ರ ವೇಳೆಗೆ ಭಾರತದಲ್ಲಿ ಮಾವೋವಾದ ಕೊನೆಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.(ಏಜೆನ್ಸೀಸ್​​)