ನ್ಯೂಸ್

ಇಂದಿನಿಂದ ಹಲವು ಆರ್ಥಿಕ ಬದಲಾವಣೆ

ನವದೆಹಲಿ: ದೇಶದಲ್ಲಿ ಆಗಸ್ಟ್ 1ರಿಂದ ಹಲವಾರು ಪ್ರಮುಖ ಆರ್ಥಿಕ ಬದಲಾವಣೆಗಳು ಜಾರಿಗೆ ಬರಲಿದ್ದು, ಅವು ಜನರ ದೈನಂದಿನ ಹಣಕಾಸು ವಹಿವಾಟು, ಪ್ರಯಾಣ ಮತ್ತು ಕ್ರೆಡಿಟ್ ಕಾರ್ಡ್ ಸೌಲಭ್ಯಗಳ ಮೇಲೆ ಪರಿಣಾಮ ಬೀರಲಿವೆ. ಯುಪಿಐ ವಹಿವಾಟುಗಳಿಗೆ ಪರಿಷ್ಕೃತ ನಿಯಮಗಳು, ಖಾಸಗಿ ವಾಹನಗಳಿಗೆ ವಾರ್ಷಿಕ ಫಾಸ್ಟ್​ಟ್ಯಾಗ್​ ಪಾಸ್​ನ ಹೊಸ ಯೋಜನೆ, ಆಯ್ದ ಕ್ರೆಡಿಟ್ ಕಾರ್ಡ್​ಗಳಲ್ಲಿ ಉಚಿತ ವಿಮಾ ಕವರೇಜ್ ರದ್ದತಿ ಮುಂತಾದವು ಇದರಲ್ಲಿ ಸೇರಿವೆ.

ಯುಪಿಐ ಪರಿಷ್ಕೃತ ನಿಯಮಗಳು: ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಆ. 1ರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ (ಯುಪಿಐ) ವಹಿವಾಟುಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ.

ಬ್ಯಾಲೆನ್ಸ್ ಚೆಕ್​ಗೆ ಮಿತಿ: ಫೋನ್​ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಯುಪಿಐ ಆಪ್​ಗಳಲ್ಲಿ ಬಳಕೆದಾರರು ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ತಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ಈ ಮಿತಿಯು ಪ್ರತಿ ಆಪ್​ಗೆ ಪ್ರತ್ಯೇಕವಾಗಿರುತ್ತದೆ.

ವಹಿವಾಟಿನ ಸ್ಟೇಟಸ್ ಚೆಕಿಂಗ್: ಯಾವುದೇ ವಹಿವಾಟಿನ ಸ್ಟೇಟಸ್ ಪರಿಶೀಲಿಸಲು 90 ಸೆಕೆಂಡ್​ಗಳ ಅಂತರದಲ್ಲಿ ಕೇವಲ 3 ಬಾರಿ ಅವಕಾಶ.

ಆಟೋಪೇ ಶೆಡ್ಯೂಲಿಂಗ್: ಒಟಿಟಿ ಸಬ್​ಸ್ಕ್ರಿಪ್ಶನ್, ಮ್ಯೂಚುವಲ್ ಫಂಡ್ ಮುಂತಾದ ಆಟೋಮ್ಯಾಟಿಕ್ ಪೇಮೆಂಟ್​ಗಳು ಇನ್ನು ಮುಂದೆ ಬೆಳಗ್ಗೆ 10 ಗಂಟೆಗೆ ಮೊದಲು, ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಮತ್ತು ರಾತ್ರಿ 9.30ರ ನಂತರ ಮಾತ್ರ ನಡೆಯಲಿವೆ. ಬ್ಯಾಂಕ್ ಸರ್ವರ್​ಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶ.

ಪೇಮೆಂಟ್ ದೃಢೀಕರಣ: ವಹಿವಾಟಿಗೆ ಮುನ್ನ ಫಲಾನುಭವಿಯ ಹೆಸರನ್ನು ಪ್ರದರ್ಶಿಸಲಾಗುತ್ತದೆ. ಇದರಿಂದ ಬೇರೆಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಪೇಮೆಂಟ್ ರಿವರ್ಸಲ್ ಮಿತಿ: ಒಬ್ಬ ಬಳಕೆದಾರ 30 ದಿನಗಳಲ್ಲಿ ಗರಿಷ್ಠ 10 ಬಾರಿ ಮಾತ್ರ ಪೇಮೆಂಟ್ ರಿವರ್ಸಲ್ (ರಿಫಂಡ್) ಸೌಲಭ್ಯ ಬಳಸಬಹುದು.

ಫಾಸ್ಟ್​​ಟ್ಯಾಗ್​ ವಾರ್ಷಿಕ ಪಾಸ್

ದೇಶದ ಎಲ್ಲ ಖಾಸಗಿ ವಾಹನಗಳಿಗೆ ಫಾಸ್ಟ್​ಟ್ಯಾಗ್​ ವಾರ್ಷಿಕ ಪಾಸ್​ನ ಹೊಸ ಯೋಜನೆಯನ್ನು ಆ. 15ರಿಂದ ಜಾರಿ ಮಾಡುವ ಸಾಧ್ಯತೆಯಿದೆ. ಹೆಚ್ಚು ಸಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಮಾಲೀಕರಿಗೆ ಟೋಲ್ ಶುಲ್ಕ ಉಳಿಸಲು ಇದರಿಂದ ಸಹಾಯವಾಗಲಿದೆ. ಇದರ ನೋಂದಣಿ, ರೀಚಾರ್ಜ್ ಮತ್ತು ನಿರ್ವಹಣೆಯನ್ನು ಯುಪಿಐ- ಸಂಯೋಜಿತ ಆಪ್​ಗಳು ಅಥವಾ ಎನ್​ಎಚ್​ಎಐನ ಅಧಿಕೃತ ಪೋರ್ಟಲ್ ಮೂಲಕ ಸರಳವಾಗಿ ಮಾಡಬಹುದು. ವಾರ್ಷಿಕ ಪಾಸ್​ನ ದರಗಳು ಎಷ್ಟು ಎಂಬುದನ್ನು ಸರ್ಕಾರ ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸ ಬೇಕಿದೆ. ಟೋಲ್​ಗೇಟ್​ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದು, ಬಳಕೆದಾರರಿಗೆ ವೆಚ್ಚ ಉಳಿತಾಯ ಮಾಡುವುದು ಇದರ ಉದ್ದೇಶ.

ಉಚಿತ ವಿಮಾ ಕವರೇಜ್ ರದ್ದತಿ

ಎಸ್​ಬಿಐ ತನ್ನ ಕೆಲವು ಕೊ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್​ಗಳಲ್ಲಿ ಒದಗಿಸುತ್ತಿದ್ದ ಉಚಿತ ವಿಮಾ ಕವರೇಜ್ ಸೌಲಭ್ಯವನ್ನು ಆ. 1ರಿಂದ ಸ್ಥಗಿತಗೊಳಿಸಲಿದೆ. ವಿಮಾನ ದುರಂತ ವಿಮೆ, ವೈಯಕ್ತಿಕ ಅವಘಡಕ್ಕಿದ್ದ ವಿಮೆ ಮುಂತಾದವು ಇದರಲ್ಲಿ ಸೇರಿವೆ. ಈ ಕವರೇಜ್ ಬೇಕಿದ್ದರೆ ಗ್ರಾಹಕರು ಪ್ರತ್ಯೇಕವಾಗಿ ವಿಮಾ ಪಾಲಿಸಿ ಖರೀದಿಸಬೇಕಾಗುತ್ತದೆ.