ನ್ಯೂಸ್

ಮುಂಬಡ್ತಿ ಶಂಕೆ ನೂರೆಂಟು: ಮೀಸಲು ಬಡ್ತಿ ವಿಚಾರದಲ್ಲಿ ಸರ್ಕಾರಕ್ಕೆ ಎರಡೂ ಕಡೆ ಉರುಳು

Webdesk - Ravikanth

ಬೆಂಗಳೂರು: ಮೀಸಲು ಮುಂಬಡ್ತಿ ಸರ್ಕಾರಕ್ಕೆ ತಲೆಶೂಲೆಯಾಗಿದ್ದು, ಎರಡು ಕಡೆಯಿಂದ ಉರುಳು ಬಿಗಿಯಾಗುತ್ತಿದೆ. ಸರ್ಕಾರ ನೀಡುತ್ತಿರುವ ಮುಂಬಡ್ತಿ ಕ್ರಮ ಸರಿಯಾಗಿಲ್ಲ, ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಸೂಚನೆ ಪಾಲಿಸಲೇಬೇಕು ಎಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯವರ್ಗದ ಅಧಿಕಾರಿ ನೌಕರರು ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಜತೆಗೆ ದೊಡ್ಡ ಮಟ್ಟದ ಹೋರಾಟಕ್ಕೂ ಅಣಿಯಾಗುತ್ತಿದ್ದಾರೆ.

ಈ ಪ್ರಯತ್ನಕ್ಕೆ ಪರ್ಯಾಯವಾಗಿ ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘಟನೆಯೂ ಮೀಸಲು ಮುಂಬಡ್ತಿ ತಡಮಾಡದಂತೆ ನೀಡಬೇಕೆಂದು ಆಗ್ರಹಿಸಲು ಆರಂಭಿಸಿದೆ. ಈ ನಡುವೆ ಎರಡೂ ಬಣಗಳು ಸರ್ಕಾರಕ್ಕೆ ಮೀಸಲು ಪ್ರಮಾಣದ ಕುರಿತು ವಾದ ಮಂಡಿಸುತ್ತಿವೆ. ಸಾಮಾನ್ಯವರ್ಗದ ಪ್ರಕಾರ ಕೇಡರ್ ಆಧಾರಿತವಾಗಿ ಮೀಸಲು ಪ್ರಮಾಣ ಶೇ.18ಕ್ಕಿಂತ ಕಡಿಮೆ ಇದ್ದರೆ ಎಸ್ಸಿ-ಎಸ್ಟಿ ವರ್ಗದವರಿಗೆ ಮುಂಬಡ್ತಿ ನೀಡಬೇಕು, ಸುಪ್ರೀಂ ಕೋರ್ಟ್ ಕೂಡ ಅದನ್ನೇ ಹೇಳಿದೆ. ಆದರೆ, ಎಸ್ಸಿ-ಎಸ್ಟಿ ಪ್ರಾತಿನಿಧ್ಯ ಕಡಿಮೆ ಇದ್ದು ನಮಗೆ ಮುಂಬಡ್ತಿ ನೀಡಲೇಬೇಕೆಂದು ಎಸ್ಸಿ-ಎಸ್ಟಿ ವರ್ಗದವರ ಆಗ್ರಹವಾಗಿದೆ. ಈ ನಡುವೆ ಸರ್ಕಾರ ಸಾಂಖ್ಯಿಕ ಇಲಾಖೆ ಪ್ರಕಾರ ಮೀಸಲು ಪ್ರಮಾಣ ಸರಾಸರಿ ಶೇ.20 ದಾಟಿದೆ. ಈ ಹಂತದಲ್ಲಿ ಮುಂಬಡ್ತಿ ನೀಡಿದರೆ ಸುಪ್ರೀಂ ಕೋರ್ಟ್ ಸೂಚನೆಯ ಉಲ್ಲಂಘನೆಯಾಗಲಿದೆ.

ರತ್ನಪ್ರಭಾ ವರದಿ ಬಗ್ಗೆ ಅಸಮಾಧಾನ: ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಪ್ರಾತಿನಿಧ್ಯದ ಕುರಿತು ಹಿಂದಿನ ಮುಖ್ಯಕಾರ್ಯದರ್ಶಿ ನೀಡಿದ ವರದಿ ಬಗ್ಗೆ ಸರ್ಕಾರಿ ನೌಕರರ ಒಂದು ವರ್ಗದಲ್ಲಿ ಬಹಳ ಅಸಮಾಧಾನವಿದೆ. ತಪ್ಪು ಮಾಹಿತಿಯಿಂದ ಕೂಡಿದ ವರದಿ ನೀಡಿದ್ದಲ್ಲದೆ, ನ್ಯಾಯಾಲಯದ ದಿಕ್ಕುತಪ್ಪಿಸಲಾಗಿದೆ ಎಂಬ ಟೀಕೆಯೂ ಕೇಳಿಬಂದಿದೆ.

  • ಸಾಮಾನ್ಯ ವರ್ಗದಿಂದ ಸಿಎಂಗೆ ಪತ್ರ, ಕೇಡರ್ ಲೆಕ್ಕದಲ್ಲಿ ಶೇ.40-80 ಮೀಸಲು ಎಂದು ಲೆಕ್ಕ
  • ಎಸ್ಸಿ-ಎಸ್ಟಿ ವರ್ಗದಿಂದಲೂ ಸಿಎಂಗೆ ಪತ್ರ, ಶೇ.18 ಮೀಸಲು ದಾಟಿಲ್ಲ, ಬಡ್ತಿಕೊಡಿ ಎಂದು ಆಗ್ರಹ
  • ಸಾಂಖ್ಯಿಕ ಇಲಾಖೆ ಲೆಕ್ಕದ ಪ್ರಕಾರ ಶೇ.20 ದಾಟಿದ ಮೀಸಲು ಪ್ರಮಾಣ.
ವಾದವೇನು?
  • ಕೇಡರ್ ಆಧಾರದಲ್ಲಿ ಮೀಸಲು ಪ್ರಾತಿನಿಧ್ಯ ಶೆ.18 ಮೀರದಂತೆ ಮುಂಬಡ್ತಿ ನೀಡದರೆ ಯಾರದೂ ಆಕ್ಷೇಪವಿಲ್ಲ. ಆದರೆ, ಲೋಕೋಪಯೋಗಿ, ಜಲಸಂಪನ್ಮೂಲ, ಇಂಧನ ಇಲಾಖೆಯಲ್ಲಿ ಶೇ.60-70ಕ್ಕಿಂತ ಹೆಚ್ಚು ಮೀಸಲು ಮುಂಬಡ್ತಿ ನೀಡಲಾಗಿದೆ. ಇನ್ನು ಮುಂದೆ ನಡೆಯುವ ಮುಂಬಡ್ತಿ ಪ್ರಕ್ರಿಯೆಯನ್ನಾದರೂ ತಡೆಹಿಡಿಯಬೇಕು.
  • ಹಾಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಪೈಕಿ ಮೀಸಲು ಪ್ರಾತಿನಿಧ್ಯ ಕಡಿಮೆ ಇದೆ. ಮೀಸಲು ಮುಂಬಡ್ತಿ ನೀಡುವುದು ಕಾನೂನು ರಚನೆಯಾಗಿದೆ. ಹೀಗಾಗಿ ತಡ ಮಾಡದೇ ಮೀಸಲು ಮುಂಬಡ್ತಿ ನೀಡುವ ಮೂಲಕ ಪರಿಶಿಷ್ಟ ಜಾತಿ, ಪಂಗಡದವರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದು ಸರ್ಕಾರದ ಕರ್ತವ್ಯ.