ನ್ಯೂಸ್

ಹೊಸ ಸರ್ಕಾರದ ಎದುರು ಸಾಲುಸಾಲು ಸವಾಲು: ಗ್ಯಾರಂಟಿಗಳಿಗೆ 45 ಸಾವಿರ ಕೋಟಿ ರೂ. ಅಗತ್ಯ?

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದ ಅಧಿಕಾರ ಸೂತ್ರ ಹಿಡಿಯಲಿರುವ ನೂತನ ಕಾಂಗ್ರೆಸ್ ಸರ್ಕಾರದ ಮುಂದೆ ಸವಾಲುಗಳ ದೊಡ್ಡ ರಾಶಿಯೇ ಕಾದು ಕುಳಿತಿದ್ದು, ಇವುಗಳನ್ನು ಹೇಗೆ ನಿಭಾಯಿಸಲಿದೆ ಎಂಬುದು ಸಾರ್ವತ್ರಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಹೊಸ ಸರ್ಕಾರಕ್ಕೆ ಈಗ ಹನಿಮೂನ್ ಅವಧಿ ಎಂಬುದು ಇರುವುದಿಲ್ಲ. ಅಧಿಕಾರ ಸೂತ್ರ ಹಿಡಿದ ದಿನದಿಂದಲೇ ಈ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಾಗಿದೆ. ಮುಂದೆ ಬಿಬಿಎಂಪಿ, ಪಂಚಾಯಿತಿ ಚುನಾವಣೆಗಳನ್ನು ರಾಜ್ಯದಲ್ಲಿಯೂ ಎದುರಿಸಬೇಕಾಗಿದೆ. ಚುನಾವಣೆಯಲ್ಲಿ ತಾನೇ ಕೊಟ್ಟಿರುವ ಗ್ಯಾರಂಟಿಗಳನ್ನು ಜಾರಿಗೆ ಕೊಡುವುದು, ಅದಕ್ಕೆ ಬೇಕಾದ ಸಂಪನ್ಮೂಲದ ಕ್ರೋಡೀಕರಣ ಸೇರಿ, ನೀತಿ, ನಿರೂಪಣೆಯಲ್ಲಿ ಬದಲಾವಣೆ, ನೌಕರರ ಬೇಡಿಕೆಗಳನ್ನು ಈಡೇರಿಸುವುದು , ಹೊಸ ಬಜೆಟ್ ರೂಪಿಸುವುದು ಸೇರಿದಂತೆ ಸಾಲು ಸಾಲು ಸವಾಲುಗಳು ಕಾಯುತ್ತ ಕೂತಿವೆ.

ಗ್ಯಾರಂಟಿಗಳಿಗೆ ಸಂಪನ್ಮೂಲ: ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲ ವರ್ಗದ ಮತ ಸೆಳೆಯಲು ಐದು ಗ್ಯಾರಂಟಿಗಳನ್ನು ನೀಡಿದೆ. ಅವುಗಳನ್ನು ಮೊದಲನೇ ಸಚಿವ ಸಂಪುಟ ಸಭೆಯಲ್ಲಿಯೇ ಜಾರಿಗೆ ಕೊಡುವುದಾಗಿಯೂ ಹೇಳಿದೆ. ಅವುಗಳ ಅನುಷ್ಠಾನಕ್ಕೆ ವಾರ್ಷಿಕ 45 ಸಾವಿರ ಕೋಟಿ ರೂ.ಗಳ ಹೊರೆ ರಾಜ್ಯದ ಖಜಾನೆಯ ಮೇಲೆ ಬೀಳಲಿದೆ ಎಂಬ ಅಂದಾಜಿದೆ. ಮಹಿಳೆಯರಿಗೆ ನೀಡುವ 2000 ರೂ.ಗಳಿಗೆ ವಾರ್ಷಿಕ 25 ಸಾವಿರ ಕೋಟಿ ರೂ., ವಿದ್ಯುತ್​ಗೆ 7 ಸಾವಿರ ಕೋಟಿ ರೂ.ಗಳು, ವಿದ್ಯಾರ್ಥಿ ವೇತನಕ್ಕೆ 5 ಸಾವಿರ ಕೋಟಿ ರೂ.ಗಳು, ಉಚಿತ ಬಸ್ ಪ್ರಯಾಣಕ್ಕೆ ಹಾಗೂ 10 ಕೆಜಿ ಅಕ್ಕಿಗೆ 45 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಲೆಕ್ಕ ಹಾಕಲಾಗುತ್ತದೆ. ಎಸ್ಕಾಂಗಳ ಆರ್ಥಿಕ ಸ್ಥಿತಿಯೂ ಹದಗೆಡದಂತೆ ಎಚ್ಚರವಹಿಸಬೇಕಾಗಿದೆ. ಈ ಯೋಜನೆಗಳನ್ನು ಜಾರಿಗೆ ಕೊಟ್ಟ ಕೂಡಲೇ ಸಂಪನ್ಮೂಲ ಸಂಗ್ರಹದ ಕಡೆಗೂ ಗಮನ ಹರಿಸಬೇಕಾಗುತ್ತದೆ. ಯಾವ ಯೋಜನೆಗೆ ಹಣ ಕಡಿತ, ಹೆಚ್ಚುವರಿ ಸಂಪನ್ಮೂಲ ಸಂಗ್ರಹ ಎಲ್ಲಿಂದ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಹೊಸ ಸರ್ಕಾರವೇ ಉತ್ತರ ನೀಡಬೇಕಾಗಿದೆ. ರಾಜ್ಯದ ಬಜೆಟ್ ಗಾತ್ರವೇ 3 ಲಕ್ಷ ಕೋಟಿ ರೂ.ಗಳು, ಅದರಲ್ಲಿ ಬದ್ಧತಾ ವೆಚ್ಚವೇ 1 ಲಕ್ಷ ಕೋಟಿ ರೂ.ಗಳನ್ನು ಮೀರಲಿದೆ.

ಕಾನೂನುಗಳ ಬದಲಾವಣೆ ಸುಲಭವೇ: ಚುನಾವಣೆಯಲ್ಲಿ ಮತಗಳ ಕ್ರೋಡೀಕರಣಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದು, ಹಿಂದಿನ ಕಾನೂನುಗಳನ್ನೇ ಜಾರಿಗೆ ಕೊಡುವುದಾಗಿ ಹೇಳಿದೆ. ಈ ಕಾಯ್ದೆಗಳನ್ನು ಮುಟ್ಟುತ್ತಿದ್ದಂತೆ ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳಾಗುವ ಸಾಧ್ಯತೆಗಳಿವೆ. ಅದನ್ನು ಸರ್ಕಾರ ಹೇಗೆ ನಿಭಾಯಿ ಸಲಿದೆ ಎಂಬುದು ಸಹ ದೊಡ್ಡ ಸವಾಲಿನ ವಿಷಯವೇ ಆಗಿದೆ.

ನೀತಿ ನಿರೂಪಣೆ ಹೇಗೆ: ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಗಣತಿ ಮಾಡಿಸಲಾಗಿದೆ. ಆ ವರದಿ ಜಾರಿಗೆ ಕೊಡಬೇಕಾಗುತ್ತದೆ. ಅದೊಂದು ದೊಡ್ಡ ಸಂಕಷ್ಟದ ವಿಷಯವಾಗಿದೆ. ರೈತರ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಕೃಷಿ ಬೆಲೆ ಆಯೋಗದ ವರದಿ ಜಾರಿಗೆ ಬರಬೇಕಾಗಿದೆ. ಇದರ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುವುದಾಗಿಯೂ ಹೇಳಿದೆ. ಬಿಜೆಪಿಯಲ್ಲಿ ತಿದ್ದುಪಡಿಯಾದ ಪಠ್ಯ ಬದಲಾವಣೆ ಮಾಡಬೇಕಾಗಿದೆ. ಪಕ್ಷ ಕೊಟ್ಟ ಆ ಭರವಸೆಗಳನ್ನು ಈಡೇರಿಸಬೇಕಾಗಿದೆ.

ಮೀಸಲಾತಿಯ ಹೆಚ್ಚಳ: ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವುದಾಗಿ ಪಕ್ಷ ಹೇಳಿತ್ತು. ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರ ಮೀಸಲಾತಿಯನ್ನು ಮತ್ತೆ ಜಾರಿಗೆ ತರುವುದಾಗಿ ಪಕ್ಷ ಹೇಳಿದೆ. ಅದನ್ನು ಪಕ್ಷ ಹೇಗೆ ನಿಭಾಯಿಸಲಿದೆ ಎಂಬುದನ್ನು ನೋಡಬೇಕಾಗಿದೆ. ಮೀಸಲಾತಿ ಪ್ರಮಾಣವನ್ನೇ ಶೇ. 75ಕ್ಕೆ ಏರಿಕೆ ಮಾಡಿ ಎಲ್ಲ ವರ್ಗಗಳಿಗೂ ನ್ಯಾಯ ಕೊಡುತ್ತೇವೆ ಎಂಬುದು ಕಾಂಗ್ರೆಸ್​ನ ಭರವಸೆಯಾಗಿದೆ. ಎಸ್​ಟಿ ಸಮುದಾಯದ ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದಲೇ ಮೀಸಲಾತಿ ವಿಚಾರ ಸರಿಯಾಗಿ ನಿಭಾಯಿಸುವ ಜವಾಬ್ದಾರಿ ಪಕ್ಷದ ಮೇಲಿದೆ.

ನೌಕರರ ಸಮಸ್ಯೆ: ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗ ಜಾರಿಗೆ ಕೊಡಲೇಬೇಕಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 11 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಅದಕ್ಕೂ ಸಂಪನ್ಮೂಲ ಕ್ರೋಡೀಕರಣ ಮಾಡಲೇಬೇಕಾಗಿದೆ. ಅದರ ಜತೆಗೆ ಎನ್​ಪಿಎಸ್ ನೌಕರರು ಹಳೆಯ ಪಿಂಚಣಿ ಯೋಜನೆಗೆ ಒತ್ತಾಯ ಮಾಡುತ್ತಿದ್ದಾರೆ. ಅದೇ ವಿಚಾರದಲ್ಲಿಯೇ ಪಟ್ಟು ಹಿಡಿದು ಹೋರಾಟ ಮಾಡಿದ್ದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯೂ ಹೇಳಿತ್ತು. ಇದೀಗ ಆ ನಿಟ್ಟಿನಲ್ಲಿ ನೌಕರರು ಸಿಟ್ಟಿಗೇಳದಂತೆ ಹೇಗೆ ನಿಭಾಯಿಸಲಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.

ಹೊಸ ಬಜೆಟ್: ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್​ನ್ನು ಈಗ ಹೊಸದಾಗಿ ಮಾಡಿಕೊಳ್ಳಬೇಕಾಗಿದೆ. ಬೊಮ್ಮಾಯಿ 2023ರ ಮಾರ್ಚ್ 31ರ ವರೆಗಿನ ವೆಚ್ಚ ನಿರ್ವಹಣೆಯ ತನಕ ಮಾತ್ರ ಸದನದ ಒಪ್ಪಿಗೆ ಪಡೆದಿದ್ದರು. ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಸೇರಿ ಅನೇಕ ಯೋಜನೆಗಳನ್ನು ನಿಲ್ಲಿಸಿತ್ತು. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ಸಾಮಾಜಿಕ ಪಿಂಚಣಿಗಳು ಬಿಡುಗಡೆಯಾಗಿಲ್ಲ. ಅವುಗಳಿಗೂ ಬಜೆಟ್​ನಲ್ಲಿ ಹಣ ಹೊಂದಾಣಿಕೆ ಮಾಡಬೇಕಾಗಿದೆ. ಇಂತಹ ಹತ್ತು ಹಲವು ಸವಾಲುಗಳಿದ್ದು ಅವುಗಳನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ನೋಡಬೇಕಾಗಿದೆ.

ಕೇಂದ್ರದ ಜತೆಗೆ ಸಾಮರಸ್ಯ: ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಾಕಷ್ಟು ಕಿತ್ತಾಡಿದೆ. ಬಿಜೆಪಿಯ ವರಿಷ್ಠರೆಲ್ಲ ಇಲ್ಲಿಗೆ ಬಂದು ಪ್ರಚಾರ ಮಾಡಿದ್ದಾರೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಜತೆಗೆ ಸಾಮರಸ್ಯ ಸಾಧಿಸಿಕೊಂಡು ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಹಾಗೂ ತೆರಿಗೆ ಪಾಲನ್ನು ಸರಿಯಾಗಿ ಪಡೆದುಕೊಳ್ಳಬೇಕಾಗಿದೆ. ರಾಜ್ಯದಿಂದ ಸುಮಾರು 3 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಅದರಲ್ಲಿ ನಮ್ಮ ಪಾಲನ್ನು ಪಡೆಯಬೇಕಾಗಿದೆ.