ನ್ಯೂಸ್

ಮಾನವನ ಮೃತದೇಹದಿಂದ ಗೊಬ್ಬರ!

Bengaluru - General - Rama Kishan K V

ನ್ಯೂಯಾರ್ಕ್: ಮಾನವ ಮೃತದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ (ಹ್ಯೂಮನ್ ಕಾಂಪೋಸ್ಟಿಂಗ್) ‘ಹಸಿರು ಅಂತ್ಯಕ್ರಿಯೆ’ಗೆ ಅಮೆರಿಕದ ನ್ಯೂಯಾರ್ಕ್ ರಾಜ್ಯ ಅನುಮೋದನೆ ನೀಡಿದೆ.

ಇದು ಈ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ ಆರನೇ ರಾಜ್ಯವಾಗಿದೆ. ಮೃತಪಟ್ಟ ವ್ಯಕ್ತಿಗಳ ದೇಹವನ್ನು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸುವುದನ್ನು ಹ್ಯೂಮನ್ ಕಾಂಪೋಸ್ಟಿಂಗ್ ಎನ್ನುತ್ತಾರೆ. ನಂತರ ಅದನ್ನು ಸಸಿಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ. ಇದೊಂದು ಪರಿಸರ-ಸ್ನೇಹಿ ಪ್ರಕ್ರಿಯೆಯಾಗಿದೆ. ವಾಷಿಂಗ್ಟನ್, ‘ಹಸಿರು ಸಂಸ್ಕಾರ’ಕ್ಕೆ ಅನುಮತಿ ನೀಡಿದ್ದ ಮೊದಲ ರಾಜ್ಯವಾಗಿದೆ. ಆನಂತರ ಕೊಲರಾಡೊ, ಒರಿಗಾನ್, ವೆರ್ವೆಂಟೊ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳು ಕೂಡ ಇದನ್ನು ಕಾನೂನುಬದ್ಧಗೊಳಿಸಿದ್ದವು. ಇದೀಗ ನ್ಯೂಯಾರ್ಕ್ ರಾಜ್ಯಪಾಲ ಕ್ಯಾಟಿ ಹೋಚುಲ್ ಶನಿವಾರ ಸಹಿ ಹಾಕಿದ್ದಾರೆ.

ಪ್ರಕ್ರಿಯೆ ಹೇಗೆ?:

ಮೃತ ದೇಹವನ್ನು ಮುಚ್ಚಿದ ಪೆಟ್ಟಿಗೆಯಲ್ಲಿರಿಸಿ ಮರದ ತುಂಡುಗಳು, ಒಣ ಹುಲ್ಲು ಮತ್ತಿತರ ವಸ್ತುಗಳನ್ನಿರಿಸಿ ದೇಹವನ್ನು ಮಣ್ಣಾಗಿ ಪರಿವರ್ತಿಸಲಾಗುತ್ತದೆ. ಸೂಕ್ಷ್ಮ ಜೀವಿಗಳ ಪ್ರಕ್ರಿಯೆಯಿಂದ ದೇಹ ಮಣ್ಣಾಗುತ್ತದೆ. ದೇಹವು ಮಣ್ಣಾಗಲು ಕೆಲವು ತಿಂಗಳು ಹಿಡಿಯುತ್ತದೆ. ಅದರಲ್ಲಿರುವ ಸೂಕ್ಷಾ್ಮಣು ಜೀವಿಯನ್ನು ಕೊಲ್ಲಲು ಅದನ್ನು ಬಿಸಿ ಮಾಡಲಾಗುತ್ತದೆ ಹಾಗೂ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಅದನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಮೃತ ದೇಹವನ್ನು ಸುಡುವ ಅಥವಾ ಹೂಳುವ ಪ್ರಕ್ರಿಯೆಗಿಂತ ಹ್ಯೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆ ಹೆಚ್ಚು ಪರಿಸರ-ಸ್ನೇಹಿ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.