ನವದೆಹಲಿ: ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು 1999ರಲ್ಲಿ ಹತ್ಯೆ ಮಾಡಿ 2 ದಶಕಕ್ಕೂ ಹೆಚ್ಚುಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ ಕೊಲೆಗಾರ ಮನು ಶರ್ಮನನ್ನು ಸನ್ನಡತೆ ಹಾಗೂ ಅನುಕಂಪದ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಶಿಕ್ಷೆ ಮರುಚಿಂತನೆ ಮಂಡಳಿಯ (ಎಸ್ಆರ್ಬಿ) ಶಿಫಾರಸನ್ನು ಆಧರಿಸಿ ಮನು ಶರ್ಮನನ್ನು ಬಿಡುಗಡೆ ಮಾಡಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಆದೇಶ ಹೊರಡಿಸಿದ್ದಾರೆ.
ಮನು ಸರ್ಮ ಸೇರಿ 34 ಸಜಾಬಂಧಿಗಳನ್ನು ಸನ್ನಡತೆ ಮತ್ತು ಅನುಕಂಪದ ಆಧಾರದಲ್ಲಿ ಬಿಡುಗಡೆ ಮಾಡಲು ಅರ್ಹರಾಗಿರುವವರ ಬಿಡುಗಡೆ ಕುರಿತು ಚರ್ಚಿಸಲು ಎಸ್ಆರ್ಬಿ ಕಳೆದ ತಿಂಗಳು ಸಭೆ ನಡೆಸಿತ್ತು. ಪೆರೊಲ್ ಮೇಲೆ ತೆರಳಿ ರೇಪ್ ಮತ್ತು ಕೊಲೆ, ದರೋಡೆ ಮಾಡುವಾಗ ಹತ್ಯೆ, ಭಯೋತ್ಪಾದನಾ ಕೃತ್ಯದಲ್ಲಿ ಹತ್ಯೆ ಮತ್ತು ಕೊಲೆ ಪ್ರಕರಣಗಳಂಥ ಪ್ರಕರಣಗಳನ್ನು ಹೊರತುಪಡಿಸಿ, ಈಗಾಗಲೆ 14 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಪೂರೈಸಿರುವ ಸಜಾಬಂಧಿಗಳನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸಿತ್ತು.
ಇದಕ್ಕೂ ಮುನ್ನ 2019ರ ನವೆಂಬರ್ನಲ್ಲಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮನು ಶರ್ಮನ ವಕೀಲ ಅಮಿತ್ ಸಹಾನಿ, ಜೈಲಿನಲ್ಲಿದ್ದು ಸಂಪೂರ್ಣ ಶಿಕ್ಷಾವಧಿಯನ್ನು ಪೂರ್ಣಗೊಳಿಸದ್ದಲ್ಲದೆ, ಶಿಕ್ಷಾವಧಿಯಲ್ಲಿ ಸನ್ನಡತೆ ತೋರಿದರೂ ನನ್ನ ಕಕ್ಷಿದಾರರನ್ನು ಬಿಡುಗಡೆ ಮಾಡಲು ಎಸ್ಆರ್ಬಿ ನಾಲ್ಕು ಬಾರಿ ನಿರಾಕರಿಸಿದೆ. ಇದು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಸ್ಆರ್ಬಿಯ ಮುಂದಿನ ಸಭೆಯಲ್ಲಿ ಮನು ಶರ್ಮನನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸುವಂತೆ ದೆಹಲಿ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಎಸ್ಆರ್ಬಿ ಮೇ 11ರಂದು ನಡೆದಿದ್ದ ಸಭೆಯಲ್ಲಿ ಮನು ಶರ್ಮನ ಬಿಡುಗಡೆ ವಿಷಯದ ಕುರಿತೂ ಚರ್ಚಿಸಿತ್ತು.
ಹರಿಯಾಣದ ಪ್ರಭಾವಿ ರಾಜಕಾರಣಿ ವಿನೋದ್ ಶರ್ಮ ಅವರ ಪುತ್ರನಾದ ಸಿದ್ಧಾರ್ಥ ವಸಿಷ್ಠ (43) ಎಂಬ ಮೂಲನಾಮ ಹೊಂದಿರುವ ಮನು ಶರ್ಮ 1999ರ ಏಪ್ರಿಲ್ 30ರಂದು ಮದ್ಯ ವಿತರಣೆ ಮಾಡುತ್ತಿದ್ದ ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಬಾರ್ ಮುಚ್ಚುವ ಸಮಯವಾದ್ದರಿಂದ, ತನಗೆ ಮದ್ಯ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕಾಗಿ ಈತ ಜೆಸ್ಸಿಕಾ ಅವರನ್ನು ಸಾಯಿಸಿದ್ದ.
ಇದರ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಮನು ಶರ್ಮನನ್ನು ಖುಲಾಸೆಗೊಳಿಸಿತ್ತು. ಆ ಹಂತದಲ್ಲಿ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮತ್ತೊಮ್ಮೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ವಿಚಾರಣೆ ಅವಧಿಯಲ್ಲಿ ಹಾಜರುಪಡಿಸಲಾದ ಭೌತಿಕ ಸಾಕ್ಷ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಅಧೀನ ನ್ಯಾಯಾಲಯ ಎಡವಿದೆ ಎಂದು ಹೇಳಿ 2006ರಲ್ಲಿ ಮನು ಶರ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2010ರಲ್ಲಿ ಸುಪ್ರೀಂಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಜೈಲಿನಲ್ಲಿ ಉದಾತ್ತ ಸೇವೆ: ಮನು ಶರ್ಮ ತನ್ನ ಶಿಕ್ಷಾವಧಿಯಲ್ಲಿ ಜೈಲಿನಲ್ಲಿ ಸಿದ್ಧಾರ್ಥ ವಸಿಷ್ಠ ಚಾರಿಟಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದ. ಅಂದಾಜು ಎಂಟು ವರ್ಷಗಳ ಹಿಂದೆ ತಿಹಾರ್ ಜೈಲಿನಲ್ಲಿ ಸ್ಥಾಪನೆಗೊಂಡ ಈ ಟ್ರಸ್ಟ್ ಮೂಲಕ ಸಜಾಬಂಧಿಗಳಾಗಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಿದ್ದ. ಇದು ಆತನನ್ನು ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು.