ನ್ಯೂಸ್

ರಾಜೀನಾಮೆ ನೀಡಿ ಒಂದೇ ದಿನದಲ್ಲಿ ಹಿಂಪಡೆದ ಬಿಜೆಪಿ ಸಂಸದ! ಮನವೊಲಿಸುವಲ್ಲಿ ಯಶಸ್ವಿಯಾದ ಸಿಎಂ

ಗಾಂಧಿನಗರ: ಗುಜರಾತ್​ನ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಮನ್ಸುಖ್​ ವಾಸವಾ ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬುಧವಾರದಂದು ಅದನ್ನು ವಾಪಾಸು ಪಡೆದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಅವರು ರಾಜೀನಾಮೆ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಹೇಳಲಾಗಿದೆ.

ಮನ್ಸುಖ್​ ಅವರು ಮಂಗಳವಾರದಂದು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್​ ಪಾಟಿಲ್​ ಅವರಿಗೆ ಕಳುಹಿಸಿಕೊಟ್ಟಿದ್ದರು. ನನಗೆ ಪಕ್ಷ ಹೆಚ್ಚಿನ ಜವಾಬ್ದಾರಿಯನ್ನೇ ಕೊಟ್ಟಿತ್ತು. ನನ್ನ ತಪ್ಪಿನಿಂದಾಗಿ ಪಕ್ಷಕ್ಕೆ ಕೆಟ್ಟ ಹೆಸರು ಬರಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಮುಂದಿನ ಕೇಂದ್ರ ಬಜೆಟ್​ ಅಧಿವೇಶನದ ಸಮಯದಲ್ಲಿ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಅವರು ಹೇಳಿಕೊಂಡಿದ್ದರು.

ರಾಜೀನಾಮೆ ನೀಡಿದ ನಂತರ ಅವರು ಸಿಆರ್​ ಪಾಟೀಲ್​ರನ್ನು ಭೇಟಿಯಾಗಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ವಿಜಯ್​ ರೂಪಾಣಿ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದಾದ ನಂತರ ತಮ್ಮ ರಾಜೀನಾಮೆಯನ್ನು ವಾಪಾಸು ಪಡೆದಿದ್ದಾರೆ ಎನ್ನಲಾಗಿದೆ.

ಆರು ಬಾರಿ ಭರೂಚ್​ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಮನ್ಸುಖ್​ ಅವರು, ರಾಜ್ಯ ಬಿಜೆಪಿಯೊಂದಿಗೆ ಮನಸ್ಥಾಪ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ತಾವು ಎತ್ತಿದ್ದ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಬೇಸರದಿಂದ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. (ಏಜೆನ್ಸೀಸ್​)