1796ರ ಆಗಸ್ಟ್ 15ರಂದು ಕಿತ್ತೂರು ಸಂಸ್ಥಾನದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜನಿಸಿದ ರಾಯಣ್ಣ, ಚಿಕ್ಕಂದಿನಲ್ಲೇ ಕತ್ತಿ ವರಸೆ, ಕುಸ್ತಿ, ಕುದುರೆ ಸವಾರಿ ಕಲಿತಿದ್ದ. ಅಜ್ಜ ರೋಗಪ್ಪ ಮತ್ತು ತಂದೆ ಭರಮಪ್ಪನಂತೆ ಅಶ್ವದಳದ ಸೈನಿಕನಾದ. ಧಾರವಾಡ ಜಿಲ್ಲಾಧಿಕಾರಿ ಥ್ಯಾಕರೆ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯಡಿ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ. ರಾಣಿ ಚನ್ನಮ್ಮ ಇದರ ವಿರುದ್ಧ ಪ್ರತಿಭಟಿಸಿ 1824ರ ಅ. 23ರಂದು ಪ್ರಥಮ ಆಂಗ್ಲೋ-ಕಿತ್ತೂರು ಯುದ್ಧ ಆರಂಭಿಸಿದಳು. ಈ ಯುದ್ಧದಲ್ಲಿ ಚನ್ನಮ್ಮಾಜಿಯ ನಿಷ್ಠಾವಂತ ಸೇವಕನಾಗಿ ಸಂಗೊಳ್ಳಿ ರಾಯಣ್ಣ ಹೋರಾಡಿದ. ಕಿತ್ತೂರು ವಿಜಯೋತ್ಸವದ ಸಡಗರ, ಸಂಭ್ರಮಕ್ಕೆ ತನ್ನದೇ ಆದ ಕೊಡುಗೆ ನೀಡಿದ. 1824ರ ಡಿ. 3ರಂದು ನಡೆದ ದ್ವಿತೀಯ ಆಂಗ್ಲೋ-ಕಿತ್ತೂರು ಯುದ್ಧದಲ್ಲ್ಲೂ ರಾಯಣ್ಣ ಭಾಗವಹಿಸಿದ್ದ. 1828-29ರಲ್ಲಿ ಇನಾಂ ಕಾಯ್ದೆಯನ್ನು ವಿರೋಧಿಸಿ ರಾಯಣ್ಣ ದೊಡ್ಡ ಹೋರಾಟ ನಡೆಸಿದ.
ನಂತರವೂ ಹಲವು ವಿಷಯಗಳಲ್ಲಿ ರಾಯಣ್ಣ ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ. ತನ್ನದೇ ಆದ ಸೈನ್ಯವನ್ನು ಕಟ್ಟಿಕೊಂಡು ಬ್ರಿಟಿಷ್ ಸೈನಿಕರ ಮೇಲೆ ಮತ್ತು ಕಚೇರಿಗಳ ಮೇಲೆ ಹಲವಾರು ಬಾರಿ ದಾಳಿ ಮಾಡಿದ. ಕೆಲವು ಸಲ ಬಂಧಿತನೂ ಆದ. ಜೈಲಿನಿಂದ ತಪ್ಪಿಸಿಕೊಂಡು ಆತ ಕಾಡಿನಲ್ಲಿ ಜೀವಿಸಿದ ಸಂದರ್ಭಗಳೂ ಇವೆ.
1830ರಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಯಣ್ಣನ ವಿರುದ್ಧ ಕೆಲವು ಸ್ಥಳೀಯರೇ ಪಿತೂರಿ ಮಾಡುತ್ತಾರೆ. ಆ ಪ್ರಕಾರ, ರಾಯಣ್ಣನ ತಂಡವನ್ನು ಸೇರಿ ಕಿತ್ತೂರು ಪರ ಹೋರಾಡುವ ನಾಟಕ ಮಾಡುತ್ತಾರೆ. 1830ರ ಏ. 8ರಂದು ರಾಯಣ್ಣ ಮತ್ತವರ ಸಂಗಡಿಗರನ್ನು ಬಂಧಿಸಲಾಗುತ್ತದೆ. 8 ತಿಂಗಳು ವಿಚಾರಣೆ ನಡೆದು ರಾಯಣ್ಣ ಸಹಿತ ಏಳು ಜನರನ್ನು 1831ರ ಜ. 26ರಂದು ಗಲ್ಲಿಗೇರಿಸಲಾಗುತ್ತದೆ.
ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸಪ್ಪ ಸಂಗೊಳ್ಳಿ ರಾಯಣ್ಣನ ಸಮಾಧಿ ಮೇಲೆ ಆಲದ ಸಸಿ ನೆಡುವ ಮೂಲಕ ಅಂತಿಮ ನಮನ ಸಲ್ಲಿಸುತ್ತಾನೆ. ಹುಟ್ಟೂರು ಸಂಗೊಳ್ಳಿಯಲ್ಲಿ ರಾಯಣ್ಣ ಜನಿಸಿದ ಮನೆಯ ಕಟ್ಟೆ ಮೇಲೆ ಆತ ಬಳಸಿದ ಲೋಡು ಮತ್ತು ಶಕ್ತಿಗಲ್ಲು ಇಟ್ಟು ಪೂಜಿಸಿ ದಿನಕರ್ಮ ಮಾಡುತ್ತಾರೆ. ಅದೇ ಸ್ಥಳದಲ್ಲಿ ಗ್ರಾಮಸ್ಥರು ದೇವಸ್ಥಾನ ನಿರ್ವಿುಸುತ್ತಾರೆ. ಅಂದಿನಿಂದ ಇಂದಿನವರೆಗೂ ಸಂಗೊಳ್ಳಿಯ ಡೊಳ್ಳಿನ ಮನೆತನದವರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತ ಬಂದಿದ್ದಾರೆ.
(ಲೇಖಕರು ಸಾಹಿತಿ)