| ಚಿದಂಬರ ಮುನವಳ್ಳಿ
ದೇವಸ್ಥಾನದ ಪೂಜಾರಿಯೊಬ್ಬ ಒಂದು ದಿನ ದೇವರಿಗೆ ಕೇಳಿದ- ‘ಇಷ್ಟು ದಿನದಿಂದ ನೋಡುತ್ತಿದ್ದೇನೆ ನೀವು ಮೂರ್ತಿರೂಪದಲ್ಲಿ ನಿಂತುಕೊಂಡೇ ಇದ್ದೀರಿ. ಸ್ವಲ್ಪ ಆರಾಮ ತೆಗೆದುಕೊಳ್ಳಬಾರದೇ? ನೀವು ಅನುಮತಿ ಕೊಟ್ಟರೆ ನಾನು ನಿಮ್ಮ ಸ್ಥಳದಲ್ಲಿ ಒಂದು ದಿನ ನಿಂತುಕೊಳ್ಳುತ್ತೇನೆ. ನೀವು ತಿರುಗಾಡಿ ಬನ್ನಿರಿ.’ ಅದಕ್ಕೆ ದೇವರು ‘ನಿನ್ನಿಚ್ಛೆಯಂತೆ ಆಗಲಿ. ಆದರೆ ಒಂದು ನಿಯಮವಿದೆ. ಇಲ್ಲಿ ಯಾರೇ ಬರಲಿ, ಏನಾದರೂ ಕೇಳಲಿ, ಏನು ಮಾಡಿದರೂ ನೀನೇನೂ ಮಾತನಾಡಬಾರದು. ಸುಮ್ಮನೇ ನೋಡುತ್ತಿರಬೇಕು.’ ಪೂಜಾರಿ ಒಪ್ಪಿಕೊಂಡು ತಯಾರಾಗಿ ದೇವರ ಸ್ಥಳದಲ್ಲಿ ನಿಂತ. ದೇವರು ಹೊರಗೆ ಹೋದ. ಒಬ್ಬ ವ್ಯಾಪಾರಿ ಭಕ್ತ ಬಂದು ನಮಸ್ಕಾರ ಮಾಡಿ ತಿರುಗಿ ಹೋಗುವಾಗ ಅವನ ಜೇಬಿನಿಂದ ಹಣವಿದ್ದ ಪಾಕೀಟು ಕೆಳಗೆ ಬಿತ್ತು. ಅವನು ಅದನ್ನು ಗಮನಿಸಲಿಲ್ಲ. ನಂತರ ಒಬ್ಬ ಕಡು ಬಡವ ಬಂದು ‘ನನಗೆ ಊಟಕ್ಕೆ ಗತಿ ಇಲ್ಲ. ಕುಟುಂಬದವರೆಲ್ಲರೂ ಉಪವಾಸ ಇದ್ದಾರೆ. ಏನಾದರೂ ದಯಪಾಲಿಸು’ ಎಂದು ಬೇಡಿಕೊಂಡು ಹೊರಡುವಾಗ ಈ ಪಾಕೀಟು ಕಾಣಿಸಿತು. ಅದನ್ನು ತೆಗೆದುಕೊಂಡು ದಂಡವತ್ ಪ್ರಣಾಮ ಸಲ್ಲಿಸಿ ಹೊರಟು ಹೋದ. ಅಷ್ಟರಲ್ಲಿ ಒಬ್ಬ ನಾವಿಕ ಬಂದು ‘ನಾನು ಮೂರು ತಿಂಗಳು ಸಮುದ್ರದಲ್ಲಿ ಹೋಗುವವನಿದ್ದೇನೆ. ನನ್ನ ಪರಿವಾರದ ಜವಾಬ್ದಾರಿ ನಿನ್ನದೇ’ ಎಂದು ಪ್ರಾರ್ಥಿಸಿ ತಿರುಗಿ ಹೊರಟಿದ್ದೆ ತಡ ಅಲ್ಲಿ ಈ ಮುಂಚೆ ಬಂದ ವ್ಯಾಪಾರಿಯು ಪೋಲೀಸರ ಜೊತೆ ಬಂದಿದ್ದ. ನನ್ನ ನಂತರ ಇಲ್ಲಿ ಬಂದ ಇವನೇ ನನ್ನ ಪಾಕೀಟನ್ನು ಕದ್ದಿದ್ದಾನೆಂದು ಆರೋಪಿಸಿ ಬಂಧನಕ್ಕೆ ಆಗ್ರಹಿಸಿದನು. ಈ ಘಟನೆ ನೋಡಿ ಪೂಜಾರಿಗೆ ಸುಮ್ಮನಿರಲಾಗಲಿಲ್ಲ. ಅವನ ಬಾಯಿಯಿಂದ ಮಾತು ಬಂತು-‘ಇವನು ಕಳ್ಳನಲ್ಲ. ನಿಮ್ಮ ಪಾಕೀಟು ಆ ಬಡ ವ್ಯಕ್ತಿಯ ಹತ್ತಿರವಿದೆ.’ ಪೊಲೀಸರು ಆ ಬಡ ವ್ಯಕ್ತಿಯನ್ನು ಬಂಧಿಸಿದರು.
ಸಂಜೆ ದೇವರು ಬಂದಾಗ ಪೂಜಾರಿಯು ತಾನು ನ್ಯಾಯ ದೊರಕಿಸಿ ಕೊಟ್ಟದ್ದನ್ನು ಅಭಿಮಾನದಿಂದ ಹೇಳಿದ. ದೇವರು ನಸು ನಕ್ಕು, ‘ಆ ವ್ಯಾಪಾರೀ ಅತಿ ಶ್ರೀಮಂತನಿದ್ದು ಸ್ವಲ್ಪ ಹಣ ಕಳಕೊಂಡರೆ ದೊಡ್ಡ ಹಾನಿ ಏನೂ ಆಗುತ್ತಿರಲಿಲ್ಲ. ಆ ಬಡವನ ಪರಿವಾರದ ಹೊಟ್ಟೆ ತುಂಬುತ್ತಿತ್ತು. ನಾವಿಕನು ಸಮುದ್ರದಲ್ಲಿ ಹೋಗಿದ್ದರೆ ಮುಂದಿನ ವಾರ ಸಮುದ್ರದಲ್ಲಿ ದೊಡ್ಡ ಬಿರುಗಾಳಿಗೆ ಸಿಕ್ಕಿ ಅವನ ಮರಣ ನಿಶ್ಚಿತವಾಗಿತ್ತು. ಅದನ್ನು ತಡೆಯಲು ಅವನನ್ನು ಜೇಲಿಗೆ ಹಾಕಿಸಬೇಕೆಂದಿದ್ದೆ. ನನ್ನ ಎಲ್ಲ ಯೋಜನೆಗಳನ್ನು ಬುಡಮೇಲು ಮಾಡಿದೆ.’ ಪೂಜಾರಿಗೆ ತನ್ನ ತಪ್ಪಿನ ಅರಿವಾಗಿ ‘ಕಪಟ ನಾಟಕ ಸೂತ್ರಧಾರಿಯೇ ನಿನ್ನ ಯೋಜನೆ ನಮಗೆ ತಿಳಿಯದು’ ಎಂದು ಸಾಷ್ಟಾಂಗವೆರಗಿದ.
ಗೀತೆಯಲಿ ್ಲನ ಕರõತ್ವಂ ನ ಕರ್ವಣಿ ಲೋಕಸ್ಯ ಸೃಜತಿ ಪ್ರಭುಃ’- ‘ಪ್ರಭುವು ಸುಮ್ಮನಿದ್ದುಕೊಂಡೇ ಜಗತ್ತನ್ನು ನಡೆಸುತ್ತಿರುತ್ತಾನೆ’ ಎಂದಿದೆ. ಸಣ್ಣ ಸಣ್ಣ ಶಿಕ್ಷೆಗಳನ್ನು ಕೊಟ್ಟು ದೊಡ್ಡ ಅವಘಡಗಳಿಂದ ಪಾರು ಮಾಡಿರುತ್ತಾನೆ. ಅದನ್ನು ತಿಳಿದುಕೊಂಡು ಯಾವುದಕ್ಕೂ ದೂರದೇ ನಿಷ್ಕಳಂಕ ಪ್ರೀತಿ ತೋರಿಸುವದೇ ನಿಜವಾದ ಭಕ್ತಿ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)