ನ್ಯೂಸ್

Mann Ki Baat | ಡಿಜಿಟಲ್ ಅರೆಸ್ಟ್ ಕುರಿತು ಜಾಗ್ರತೆ ವಹಿಸುವಂತೆ ಪ್ರಧಾನಿ ಮೋದಿ ಸಲಹೆ

ನವದಹೆಲಿ: ‘ಡಿಜಿಟಲ್ ಅರೆಸ್ಟ್‘ ವಂಚನೆಯ ವಿರುದ್ಧ ರಾಷ್ಟ್ರದ ಜನರಿಗೆ ಪ್ರಧಾನಿ ಮೋದಿ ಭಾನುವಾರ (ಅಕ್ಟೋಬರ್​ 27) ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸರ್ಕಾರಿ ಸಂಸ್ಥೆಗಳು ಜನರಿಗೆ ಫೋನ್ ಮೂಲಕ ಬೆದರಿಕೆ ಹಾಕುವುದಿಲ್ಲ ಮತ್ತು ಹಣಕ್ಕೆ ಬೇಡಿಕೆಯಿಡುವುದಿಲ್ಲ ಎಂದು ಹೇಳಿದ್ದಾರೆ.(Mann Ki Baat)

ಮನ್ ಕಿ ಬಾತ್​​ನ 115ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾನೂನಿನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ, ಇದು ಕೇವಲ ವಂಚನೆ, ಸುಳ್ಳು. ಕಿಡಿಗೇಡಿಗಳ ತಂಡದ ಕೃತ್ಯವಾಗಿದೆ. ಈ ಕೃತ್ಯವೆಸಗುತ್ತಿರುವವರು ಸಮಾಜದ ವೈರಿಗಳಾಗಿದ್ದಾರೆ. ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ನಿಭಾಯಿಸಲು ಎಲ್ಲಾ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಈ ಏಜೆನ್ಸಿಗಳ ನಡುವೆ ಸಮನ್ವಯವನ್ನು ಸೃಷ್ಟಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಡಿಜಿಟಲ್ ಬಂಧನದ ಸಂತ್ರಸ್ತರಲ್ಲಿ ಪ್ರತಿ ವರ್ಗ ಮತ್ತು ಪ್ರತಿ ವಯಸ್ಸಿನ ಜನರು ಸೇರಿದ್ದಾರೆ. ಭಯದಿಂದ ಜನರು ಕಷ್ಟಪಟ್ಟು ದುಡಿದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ನಿಮಗೆ ಎಂದಾದರೂ ಅಂತಹ ಕರೆ ಬಂದರೆ ನೀವು ಭಯಪಡಬಾರದು. ಯಾವುದೇ ತನಿಖಾ ಸಂಸ್ಥೆಯು ಫೋನ್ ಕರೆ ಅಥವಾ ವಿಡಿಯೋ ಕರೆ ಮೂಲಕ ಇಂತಹ ವಿಚಾರಣೆಗಳನ್ನು ನಡೆಸುವುದಿಲ್ಲ ಎಂಬುದನ್ನು ನೀವು ತಿಳಿದಿರಬೇಕು ಎಂದು ಎಚ್ಚರಿಸಿದರು.

ಡಿಜಿಟಲ್ ಭದ್ರತೆಯ ಮೂರು ಹಂತಗಳನ್ನು ನಿಮಗೆ ಹೇಳುತ್ತೇನೆ. ನಿರೀಕ್ಷಿಸಿ, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ ಎಂಬುದು ಆ ಮೂರು ಹಂತಗಳಾಗಿವೆ.

  • ಹಂತ 1; ನಿಮಗೆ ಕರೆ ಬಂದ ತಕ್ಷಣ ನಿರೀಕ್ಷಿಸಿ, ಗಾಬರಿಯಾಗಬೇಡಿ, ಶಾಂತವಾಗಿರಿ. ಯಾವುದೇ ಆತುರದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಸಾಧ್ಯವಾದರೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ರೆಕಾರ್ಡಿಂಗ್ ಮಾಡಿ.
  • ಹಂತ 2; ಯೋಚಿಸಿ. ಯಾವುದೇ ಸರ್ಕಾರಿ ಸಂಸ್ಥೆ ದೂರವಾಣಿ ಮೂಲಕ ಇಂತಹ ಬೆದರಿಕೆಗಳನ್ನು ನೀಡುವುದಿಲ್ಲ. ವಿಡಿಯೋ ಕಾಲ್‌ನಲ್ಲಿ ವಿಚಾರಿಸುವುದಿಲ್ಲ ಅಥವಾ ಅಂತಹ ಹಣವನ್ನು ಕೇಳುವುದಿಲ್ಲ. ನಿಮಗೆ ಭಯವಾಗಿದ್ದರೆ ಏನೋ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಿ.
  • ಹಂತ 3; ಕ್ರಮ ತೆಗೆದುಕೊಳ್ಳಿ. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಅನ್ನು ಡಯಲ್ ಮಾಡಿ. http://cybercrime.gov.in ನಲ್ಲಿ ವರದಿ ಮಾಡಿ. ನಿಮ್ಮ ಕುಟುಂಬ ಮತ್ತು ಪೊಲೀಸರಿಗೆ ಮಾಹಿತಿ ನೀಡಿ, ಸಾಕ್ಷ್ಯವನ್ನು ಸುರಕ್ಷಿತವಾಗಿ ಇರಿಸಿ ಎಂದು ಸೂಚಿಸಿದರು.(ಏಜೆನ್ಸೀಸ್​​)