ನವದೆಹಲಿ: ಬೆಂಗಳೂರಿನ ಸಹಕಾರ ನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳಿಗೆ ಹಲವು ಕ್ಷೇತ್ರಗಳಲ್ಲಿ ನಾಡಿನ ಕೀರ್ತಿ ಹೆಚ್ಚಿಸಿದ ಕರುನಾಡಿನ ಸಾಧಕರ ಹೆಸರನ್ನು ನಾಮಕರಣ ಮಾಡಿ ಪೋಷಿಸುತ್ತಿರುವ ಹಾಗೂ ಕನ್ನಡ ಕಲಾ ವೈಭವವನ್ನು ಸಾರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ನಿತ್ಯವೂ ಕನ್ನಡ ಕಂಪನ್ನು ಪಸರಿಸುತ್ತಿರುವ ಸುರೇಶ್ ಕುಮಾರ್ ಅವರ ಪರಿಸರ, ಪರಂಪರೆ ಉಳಿವಿಗೆ ಶ್ರಮಿಸುತ್ತಿರುವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿದರು.
ಇಂದು (ಅ.30) ರೆಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ 94ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ ಅವರು ಸುರೇಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದರು.
ಕರ್ನಾಟಕದ ಬೆಂಗಳೂರು ಮೂಲದ ಸುರೇಶ್ ಕುಮಾರ್ ಎಂಬುವರಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ತಮ್ಮ ಇಡೀ ಜೀವನವನ್ನು ಪರಿಸರ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ. 20 ವರ್ಷಗಳ ಹಿಂದೆ ಅವರು ಸಂಕಲ್ಪವೊಂದನ್ನು ಮಾಡಿದರು. ಸಹಕಾರ ನಗರದಲ್ಲಿ ಅರಣ್ಯ ಸೃಷ್ಟಿಸುವುದು ಅವರ ಸಂಕಲ್ಪವಾಗಿತ್ತು. ಇದು ತುಂಬಾ ಸವಾಲಿನ ಮತ್ತು ಕಷ್ಟದ ಕೆಲಸವಾಗಿತ್ತು. ಆದರೂ, 20 ವರ್ಷಗಳ ಹಿಂದೆ ಅವರು ನೆಟ್ಟಿದ್ದ ಗಿಡಗಳು ಇಂದು 40 ಸಾವಿರ ಎತ್ತರದ ಬೃಹತ್ ಮರಗಳಾಗಿವೆ. ಇದೀಗ ಅದರ ಸೌಂದರ್ಯ ಎಲ್ಲರನ್ನು ಮೋಡಿ ಮಾಡುತ್ತಿದೆ. ಸ್ಥಳೀಯ ನಿವಾಸಿಗಳಿಗೂ ಕೂಡ ಸುರೇಶ್ ಕುಮಾರ್ ಬಗ್ಗೆ ಹೆಮ್ಮೆ ಇದೆ ಎಂದು ಹೊಗಳಿದರು.
ಇದಿಷ್ಟೇ ಅಲ್ಲದೆ, ಸುರೇಶ್ ಕುಮಾರ್ ಅವರು ಮೊತ್ತೊಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಸಹಕಾರ ನಗರದಲ್ಲಿ ಅವರು ಒಂದು ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿದ್ದಾರೆ. ಇದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಿತ್ತಾಳೆ ಪ್ಲೇಟ್ಗಳ ಮೇಲೆ ಕನ್ನಡದಲ್ಲಿ ಬರೆಯಲಾದ ಮಾಹಿತಿ ಗುಚ್ಛವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಪರಿಸರ ವ್ಯವಸ್ಥೆ ಮತ್ತು ಸಂಸ್ಕೃತಿ ಹಾಗೂ ಮುಂದೆ ಸಾಗುವುದು ಮತ್ತು ಒಟ್ಟಿಗೆ ಏಳಿಗೆ ಕಾಣುವುದು ಸೇರಿದಂತೆ ಅನೇಕ ಸಂದೇಶಗಳಿವೆ. ನಿಜಕ್ಕೂ ಸುರೇಶ್ ಕುಮಾರ್ ಅವರ ಕಾರ್ಯವನ್ನು ನಾವೆಲ್ಲರು ಶ್ಲಾಘಿಸಲೇಬೇಕು ಎಂದು ಪ್ರಧಾನಿ ಹೇಳಿದರು.