ನವದೆಹಲಿ: ಆರ್ಥಿಕ ಉದಾರೀಕರಣದ ಹರಿಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ವಿಧಿವಶರಾಗಿದ್ದು ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. 2004-2014ರಿಂದ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವರು 1991-96ರವರೆಗೆ ಪಿವಿ ನರಸಿಂಹರಾವ್ ಅವರ ಸಚಿವಸಂಪುಟದಲ್ಲಿ ವಿತ್ತ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಲೋಕಸಭೆ ಚುನಾವಣೆಯಲ್ಲಿ (Loksabha Election) ಎಂದಿಗೂ ಗೆದ್ದಿಲ್ಲ ಮತ್ತು ಹಿಂದಿ ಓದಲು ಬರುತ್ತಿರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಏರಿಳಿತದ ಬಾಲ್ಯ: ಮನಮೋಹನ ಸಿಂಗ್ (Manmohan Singh) ಅವರ ಬಾಲ್ಯ ಅನೇಕ ಏರಿಳಿತಗಳಿಂದ ಕೂಡಿತ್ತು. ತಾಯಿ ಟೈಫಾಯಿಡ್ಗೆ ಬಲಿಯಾದರು. ಮನಮೋಹನ್ ಸಿಂಗ್ ತಂದೆ ಒಂದು ಸಣ್ಣ ವ್ಯಾಪಾರದ ವಹಿವಾಟು ಇಟ್ಟುಕೊಂಡಿದ್ದರು. ಮೊದಲ ಹೆಂಡತಿ ತೀರಿದ ಬಳಿಕ ಮನಮೋಹನ್ ತಂದೆಯ ಕಡೆಯ ಅಜ್ಜ-ಅಜ್ಜಿ ಮನೆಯಲ್ಲಿ, ಓದಬೇಕಾಗಿ ಬಂತು. ಆ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಸರ್ವೆಸಾಮಾನ್ಯ. ತಾತ ಸಂತ್ ಸಿಂಗ್ ಮತ್ತು ಅಜ್ಜಿ ಜನ್ನುದೇವಿಯರದ್ದೂ ಅಂಥ ಒಂದು ಕೂಡುಕುಟುಂಬ. ಅಪ್ಪನಿಗೆ ಮಗನ ಮೇಲೆ ಪ್ರೀತಿ ಇತ್ತು. ಆದರೂ ಆತ ಮಗುವನ್ನು ಅಜ್ಜಿಯ ಮನೆಯಲ್ಲಿ ಬಿಟ್ಟ ಮೇಲೆ ನೋಡಲು ಬಂದದ್ದು, ಅದೂ ಹತ್ತು ವರ್ಷಗಳ ಅವಧಿಯಲ್ಲಿ ಕೇವಲ ಎರಡೇ ಸಲ.
ಲೋಕಸಭೆ ಚುನಾವಣೆ ಗೆದ್ದಿಲ್ಲ: 1991ರಿಂದ 2019ವರೆಗೆ ಅಸ್ಸಾಂ ಹಾಗೂ ರಾಜಸ್ಥಾನದಿಂದ ಯಶಸ್ವಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮನಮೋಹನ್ ಸಿಂಗ್ ಅವರು 1999ರಲ್ಲಿ ದಕ್ಷಿಣ ದೆಹಲಿಯಿಂದ ಲೋಕಸಭೆಗೆ ಸ್ಫರ್ಧಿಸಿ 30 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ರಾಜಕೀಯದ ಗಂಧಗಾಳಿ ಅರಿಯದ ಸಿಂಗ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವರಾಗಿ, ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದರು. ಈ ವರ್ಷ ಏಪ್ರಿಲ್ನಲ್ಲಿ ಅವರು ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.
ಹಿಂದಿ ಓದಲು ಬರುತ್ತಿರಲಿಲ್ಲ: ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಮನಮೋಹನ್ ಸಿಂಗ್ ಅವರಿಗೆ ಹಿಂದಿ ಓದಲು ಬರುತ್ತಿರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ವಿಭಜಿತ ಪಂಜಾಬ್‌ನಲ್ಲಿ (ಈಗಿನ ಪಾಕಿಸ್ತಾನ ಪಂಜಾಬ್‌ನಲ್ಲಿರುವ ಗಾಹ್) ಜನಿಸಿದ ಮನಮೋಹನ್ ಸಿಂಗ್ ಅವರಿಗೆ ಹಿಂದಿ ಓದಲು ಬರುತ್ತಿರಲಿಲ್ಲ. ವಿಭಜನೆಯ ನಂತರ ಅಮೃತಸರಕ್ಕೆ ಸ್ಥಳಾಂತರಗೊಂಡ ಮನಮೋಹನ್ ಸಿಂಗ್ ಅವರು ಪ್ರಾಥಮಿಕ ಶಿಕ್ಷಣವನ್ನು ಉರದುವಿನಲ್ಲಿ ಪಡೆದ ಕಾರಣ ಅವರಿಗೆ ಹಿಂದಿ ಮಾತನಾಡಲು ಮಾತ್ರ ಬರುತ್ತಿತ್ತು. ಆದರೆ ಓದಲು ಬರುತ್ತಿರಲಿಲ್ಲ.
ಪ್ರಧಾನಿಯಾಗಿದ್ದ ಸಮಯದಲ್ಲೂ ಅವರು ತಮ್ಮ ಭಾಷಣವಬನ್ನು ಉರ್ದುವಿನಿಲ್ಲಿ ಬರೆದುಕೊಂಡು ಅದನ್ನು ಹಿಂದಿಯಲ್ಲಿ ಓದುತ್ತಿದ್ದರು. ಕೆಲ ಸಮಯದಲ್ಲಿ ತಮ್ಮ ಮಾತೃಭಾಷೆ ಪಂಜಾಬಿಯಲ್ಲೂ ಕೂಡ ಬರೆದುಕೊಳ್ಳುತ್ತಿದ್ದರು. ಪ್ರಧಾನಿಯಾಗಿದ್ದ ಸಮಯದಲ್ಲಿ ಸಿಂಗ್ ಅವರು ತಮ್ಮ ಜನ್ಮಸ್ಥಳಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.