ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ(ಆಗಸ್ಟ್ 9) ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಈ ಪ್ರಕರಣದ ತೀರ್ಪು ನೀಡಿದೆ. ಸಂಸ್ಥೆಗಳು ತ್ವರಿತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಪರಾಧದ ಗಂಭೀರತೆಯನ್ನು ಉಲ್ಲೇಖಿಸಿ ಜಾಮೀನನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಿಸೋಡಿಯಾ ಅವರು ಮೊದಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗಿರುವುದರಿಂದ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಸಿಬಿಐ ಮತ್ತು ಇಡಿ ವಾದಿಸಿತ್ತು.
ವಿಚಾರಣಾ ನ್ಯಾಯಾಲಯಕ್ಕೆ 6 ರಿಂದ 8 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ಬಗ್ಗೆ ಪ್ರತಿಕ್ರಿಯಿಸಿದೆ. ಜಾಮೀನು ನಿಯಮ ಮತ್ತು ಜೈಲು ವಿನಾಯಿತಿ ಎಂದು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಅರ್ಥಮಾಡಿಕೊಳ್ಳಬೇಕು. ವಿಚಾರಣೆಯನ್ನು ಪೂರ್ಣಗೊಳಿಸದೆ ಜೈಲಿನಲ್ಲಿ ಇರಿಸುವ ಮೂಲಕ ಯಾರನ್ನೂ ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು ಷರತ್ತುಗಳ ಮೇಲೆ ಸಿಸೋಡಿಯಾಗೆ ಜಾಮೀನು ನೀಡಿದೆ. ಇಬ್ಬರು ಶ್ಯೂರಿಟಿಗಳೊಂದಿಗೆ 10 ಲಕ್ಷ ರೂಪಾಯಿಗಳ ಬಾಂಡ್ ಪಾವತಿಸುವಂತೆ ಸುಪ್ರೀಂಕೋರ್ಟ್ ಸಿಸೋಡಿಯಾಗೆ ಸೂಚಿಸಿದೆ. ಅದಷ್ಟೇ ಅಲ್ಲದೆ ಮನೀಶ್ ಸಿಸೋಡಿಯಾ ತಮ್ಮ ಪಾಸ್ಪೋರ್ಟ್ ಅನ್ನು ಒಪ್ಪಿಸಬೇಕು ಹಾಗೂ ವಾರಕ್ಕೆ ಎರಡು ಬಾರಿ ಸೋಮವಾರ ಮತ್ತು ಗುರುವಾರ ತನಿಕಾ ಅಧಿಕಾರಿ ಮುಂದೆ ಹಾಜರಾಗಬೇಕು ಎಂದು ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಸಿಸೋಡಿಯಾ ಅವರಿಗೆ ಕೋರ್ಟ್ ಎಚ್ಚರಿಸಿದೆ.
ದೆಹಲಿ ಅಬಕಾರಿ ನೀತಿಯ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 2023 ಫೆಬ್ರವರಿ 26ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಸಿಬಿಐ ಎಫ್‌ಐಆರ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು 2023 ಮಾರ್ಚ್ 9 ರಂದು ಬಂಧಿಸಿತ್ತು. ಸಿಸೋಡಿಯಾ ಅವರು 2023 ಫೆಬ್ರವರಿ 28ರಂದು ದೆಹಲಿ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ್ದರು. (ಏಜೆನ್ಸೀಸ್)