ಇಂಫಾಲ್: ಮಣಿಪುರದ ಉಖ್ರುಲ್ ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯ ಸಂದರ್ಭದಲ್ಲಿ ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ದೋಚಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸ್ವಚ್ಛತಾ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ವಿವಾದಿತ ಜಾಗವನ್ನು ಸ್ವಚ್ಛಗೊಳಿಸುವ ಸಂಬಂಧ ಬುಧವಾರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: Vizag Steel Plant | ಕಾರ್ಮಿಕರು, ಜನರ ಭಾವನೆಗಳ ಜತೆ ಚೆಲ್ಲಾಟ ಆಡಬೇಡಿ: ಕೆ.ಸಿ.ವೇಣುಗೋಪಾಲ್ ವಿರುದ್ಧ ಎಚ್ಡಿಕೆ ಕಿಡಿ
ಮೃತ ಮೂವರಲ್ಲಿ ಒಬ್ಬರು ರಾಜ್ಯ ಸರ್ಕಾರದ ಅಧೀನದ ಸಶಸ್ತ್ರ ಪಡೆ ಮಣಿಪುರ ರೈಫಲ್ಸ್ ಕರ್ತವ್ಯದಲ್ಲಿದ್ದರು. ತೀವ್ರವಾಗಿ ಗಾಯಗೊಂಡ 10 ಮಂದಿಯನ್ನು ಇಂಫಾಲ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರು ಉಖ್ರುಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂಸಾಚಾರದ ಸಂದರ್ಭದಲ್ಲಿ ಅಸ್ಸಾಂ ರೈಫಲ್ಸ್ ಶಿಬಿರದಿಂದ ಕೆಲವೇ ಮೀಟರ್ ದೂರದಲ್ಲಿರುವ ಉಖ್ರುಲ್ ಪೊಲೀಸ್ ಠಾಣೆ ಮೇಲೂ ದಾಳಿ ನಡೆದಿದೆ. "ಉಖ್ರುಲ್ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ, ಬಹುತೇಕ ಯುವಕರನ್ನು ಒಳಗೊಂಡ ಗುಂಪುವೊಂದು ವಿನೋ ಬಜಾರ್‌ನಲ್ಲಿರುವ ಪೊಲೀಸ್ ಠಾಣೆಗೆ ನುಗ್ಗಿ ಸರ್ಕಾರಿ ಶಸ್ತ್ರಾಸ್ತ್ರಗಳೊಂದಿಗೆ ದೋಚಿಕೊಂಡು ಪರಾರಿಯಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯಾವ ಬಗೆಯ ಮತ್ತು ಎಷ್ಟು ಶಸ್ತ್ರಾಗಳನ್ನು ಗುಂಪು ಲೂಟಿ ಮಾಡಿದೆ ಎನ್ನುವುದನ್ನು ಈಗಲೇ ಖಚಿತಪಡಿಸಲಾಗದು, ಸದ್ಯ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು. ಯುವಕರ ಗುಂಪು ಠಾಣೆಯಿಂದ ಎಕೆ-47 ಮತ್ತು ಐಎನ್ಎಸ್ಎಎಸ್ ರೈಫಲ್ಸ್ಗಳನ್ನು ದೋಚಿಕೊಂಡು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ನಾಗಾ ಸಮುದಾಯದ ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೊಬೈಲ್, ಇಂಟರ್ನೆಟ್ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಪಡೆಗಳನ್ನು ಕೂಡ ಜಿಲ್ಲೆಗೆ ಕರೆಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ಮೇ 3ರಿಂದ ಜನಾಂಗೀಯ ಘರ್ಷಣೆಯಿಂದ ಹೊತ್ತಿ ಉರಿಯುತ್ತಿರುವ ಈಶಾನ್ಯ ರಾಜ್ಯವಾದ ಇಂಫಾಲ್ನಲ್ಲಿ ಕಣಿವೆಯಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.