ಇಂಫಾಲ: ಮಣಿಪುರದಲ್ಲಿ 2017ರಲ್ಲಿ ನಡೆದ ಚುನಾವಣೆ ವೇಳೆ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಆಸ್ತಿ ವಿವರ ಮರೆಮಾಚಿದ ಮಾಜಿ ಕಾಂಗ್ರೆಸ್ ನಾಯಕರೊಬ್ಬರು ಶಾಸಕತ್ವ ಕಳೆದುಕೊಂಡಿದ್ದಾರೆ. ಮಣಿಪುರ ಹೈಕೋರ್ಟ್ ಗುರುವಾರ ಅವರ ಶಾಸಕತ್ವವನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿದೆ.
ಕಾಕ್ಚಿಂಗ್ ಕ್ಷೇತ್ರದಿಂದ ಆಯ್ಕೆಯಾದ ವೈ.ಸುರಚಂದ್ರ ಸಿಂಗ್ ಶಾಸಕತ್ವ ಕಳೆದುಕೊಂಡ ಮಾಜಿ ಕಾಂಗ್ರೆಸ್ ನಾಯಕ. 2017ರ ಚುನಾವಣೆ ಸಂದರ್ಭದಲ್ಲಿ ಸುರಚಂದ್ರ ಸಿಂಗ್ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಆಸ್ತಿವಿವರ ಮರೆಮಾಚಿರುವುದಾಗಿ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಎಂ.ರಮೇಶೋರ್ ಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣೆಯಲ್ಲಿ ರಮೇಶೋರ್ 630 ಮತಗಳ ಅಂತರದ ಸೋಲು ಅನುಭವಿಸಿದ್ದರು.
ವಿಶೇಷ ಎಂದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಸುರಚಂದ್ರ ಸಿಂಗ್ ಬಳಿಕ ಬಿಜೆಪಿ ಸೇರಿದ್ದರು. ಆ ಸಂದರ್ಭದಲ್ಲೇ ಅಸೆಂಬ್ಲಿ ಸ್ಪೀಕರ್ ಅವರನ್ನು ಅನರ್ಹಗೊಳಿಸಿದ್ದರು. ಮಣಿಪುರ ವಿಧಾನಸಭೆಯಲ್ಲಿರುವ 60 ಸ್ಥಾನಗಳ ಪೈಕಿ 28 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಆದರೆ, ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದರು. ಈಗ ಅಲ್ಲಿ ಬಿಜೆಪಿ ಸರ್ಕಾರವಿದೆ. (ಏಜೆನ್ಸೀಸ್)