ನ್ಯೂಸ್

ಆನ್​ಲೈನ್​ ಪಾಠಕ್ಕಾಗಿ ಟಿವಿ ಖರೀದಿಸಲು ಮಾಂಗಲ್ಯಸರ ಅಡವಿಟ್ಟ ತಾಯಿ!

ನರಗುಂದ: ಮಕ್ಕಳ ಆನ್​ಲೈನ್​ ಪಾಠಕ್ಕಾಗಿ ತಾಯಿಯೊಬ್ಬಳು ಮಾಂಗಲ್ಯ ಸರವನ್ನೇ ಅಡವಿಟ್ಟು ಟಿವಿ ಖರೀದಿಸಿದ್ದ ಮನಕಲಕುವ ಘಟನೆ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕರೊನಾ ಪರಿಣಾಮ ಶಾಲೆಗಳಿಗೆ ಸದ್ಯ ಮಕ್ಕಳು ಹೋಗುವಂತಿಲ್ಲ. ಕಲಿಕೆಯಿಂದ ಮಕ್ಕಳು ಹಿಂದುಳಿಯಬಾರದು ಎಂದು ಆನ್​ಲೈನ್​ ಮೂಲಕವೇ ಪಾಠ ಮಾಡಲಾಗುತ್ತಿದೆ. ಇದಕ್ಕಾಗಿ ರಡ್ಡೇರನಾಗನೂರ ಗ್ರಾಮದ ಕಸ್ತೂರೆವ್ವ ಮುತ್ತಪ್ಪ ಚಲವಾದಿ ಎಂಬುವವರು ತನ್ನಿಬ್ಬರು ಮಕ್ಕಳ ಆನ್​ಲೈನ್​ ವಿದ್ಯಾಭ್ಯಾಸಕ್ಕಾಗಿ 10 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು 20 ಸಾವಿರ ರೂಪಾಯಿಗೆ ಅಡವಿಟ್ಟಿದ್ದಾರೆ. ಇದರಲ್ಲಿ 14 ಸಾವಿರ ರೂಪಾಯಿ ಕೊಟ್ಟು ಹೊಸ ಎಲ್​ಇಡಿ ಟಿವಿ ಖರೀದಿಸಿದ್ದಾರೆ.

ಮೂಲತಃ ಕೃಷಿಕ ಕುಟುಂಬದ ಕಸ್ತೂರೆವ್ವ ಮತ್ತು ಮುತ್ತಪ್ಪ ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಸೇರಿ 4 ಮಕ್ಕಳಿದ್ದಾರೆ. ಮುತ್ತಪ್ಪ ಕೂಲಿಗಾರ. ಅಲ್ಲದೆ, ಹೈನುಗಾರಿಕೆ ಕೂಡ

ಇದೆ. ಹಿರಿಯ ಪುತ್ರಿ ಕಾವೇರಿಯ ಮದುವೆ ಮಾಡಿದ್ದಾರೆ. ಇದಕ್ಕಾಗಿ ತಮಗಿರುವ 2 ಎಕರೆ ಸ್ವಂತ ಜಮೀನಿನ ಮೇಲೆ ಈಗಾಗಲೇ 1 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಎರಡನೇ ಮಗಳು ಸುಧಾ ಪಿಯುಸಿ ಓದುತ್ತಿದ್ದಾಳೆ. 3ನೇ ಮಗಳು ಸುರೇಖಾ ಹಾಗೂ ಮಗ ಅಭಿಷೇಕನ ಆನ್​ಲೈನ್​ ಶಿಕ್ಷಣಕ್ಕಾಗಿ ಈಗ ಟಿವಿ ಖರೀದಿಸಿದ್ದಾರೆ.

ರಡ್ಡೇರನಾಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುರೇಖಾ 9ನೇ ತರಗತಿ ಓದುತ್ತಿದ್ದರೆ, ಮಗ ಅಭಿಷೇಕ 7ನೇ ತರಗತಿ ಓದುತ್ತಿದ್ದಾನೆ. ಲಾಕ್​ಡೌನ್​ ಸಡಿಲಿಕೆಯಾದ ನಂತರ ಆನ್​ಲೈನ್​ ಪಾಠಗಳನ್ನು ಆರಂಭಿಸಲಾಗಿದೆ. ನಿತ್ಯ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳನ್ನು ವೀಕ್ಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ, ಇವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಾಠ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಪಾಠದ ವಿಷಯವಾಗಿ ಶಿಕ್ಷಕರು ಕರೆ ಮಾಡಿ ಕೇಳಿದ ಪ್ರಶ್ನೆಗೆ ಮಕ್ಕಳ ಬಳಿ ಉತ್ತರ ಇರುತ್ತಿರಲಿಲ್ಲ.

ಮಕ್ಕಳ ಪರಿಸ್ಥಿತಿ ಅರಿತ ತಾಯಿ ಕಸ್ತೂರೆವ್ವ ಏನಾದರೂ ಮಾಡಿ ಟಿವಿ ಖರೀದಿಸಲು ನಾನಾ ಪ್ರಯತ್ನಗಳನ್ನು ಮಾಡಿದ್ದಾರೆ. ಗದಗ ನಗರದ ವ್ಯಕ್ತಿಯೊಬ್ಬರಲ್ಲಿ ಮಾಂಗಲ್ಯ ಸರ ಅಡವಿಟ್ಟು ಟಿವಿ ತಂದು ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಕಷ್ಟ ಕಾಲದಲ್ಲಿ ತಮ್ಮ ತಾಯಿ ಟಿವಿ ತಂದು ಕೊಟ್ಟಿದ್ದಕ್ಕೆ ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಸ್ತೂರೆವ್ವ, ನಮ್ಮ ಮನೆಯಲ್ಲಿದ್ದ ಹಳೆಯ ಟಿವಿ ಸಂಪೂರ್ಣ ಕೆಟ್ಟು ಹೋಗಿದೆ. ಹೀಗಾಗಿ, ಆನ್​ಲೈನ್​ ಪಾಠಕ್ಕಾಗಿ ನಮ್ಮಿಬ್ಬರು ಮಕ್ಕಳು ಪಕ್ಕದ ಮನೆಗಳಿಗೆ ಅಲೆದಾಡುವಂತಾಗಿತ್ತು. ಮಗಳ ಮದುವೆಗೆ ಈಗಾಗಲೇ ಕೈಗಡ ಮತ್ತು ಬ್ಯಾಂಕ್​ವೊಂದರಲ್ಲಿ ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದೇವೆ. ಈಗ ಮತ್ತೆ ಸಾಲ ಕೇಳುವುದು ಸರಿಯಲ್ಲ ಎಂದು ನನ್ನ ತಾಳಿ ಸರ ಅಡವಿಟ್ಟು ಟಿವಿ ತಂದಿದ್ದೇನೆ ಎಂದು ವಿವರಿಸಿದರು.

ಮಕ್ಕಳ ಶಿಕ್ಷಣಕ್ಕಾಗಿ ಮಾಂಗಲ್ಯ ಸರ ಅಡವಿಟ್ಟಿರುವ ಸುದ್ದಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, 'ಇಬ್ಬರು ಮಕ್ಕಳ ಆನ್​ಲೈನ್​ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಅಡವಿಟ್ಟಿರುವ ತಾಳಿ ಬಿಡಿಸಿಕೊಡುತ್ತೇನೆ. ಆನ್​ಲೈನ್​ ಪಾಠಕ್ಕೆಂದು ಖರೀದಿಸಿರುವ ಟಿವಿಯ ಮೊತ್ತವನ್ನು ಆ ಕುಟುಂಬಕ್ಕೆ ವೈಯಕ್ತಿಕವಾಗಿ ನೀಡುತ್ತೇನೆ' ಎಂದಿದ್ದಾರೆ.