ಬೆಂಗಳೂರು: ಮರ್ಸಿಡೀಸ್ ಬೆಂಜ್ ಎಂಬ ಐಷಾರಾಮಿ ಕಾರಿನ ಆಕರ್ಷಣೆಯೇ ಅಂತದ್ದು. ಸೆಕೆಂಡ್ ಹ್ಯಾಂಡ್ ಆದರೂ ಪರವಾಗಿಲ್ಲ... ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತೆ ಎಂದರೆ, ಒಂದು ಕೈ ನೋಡಿಯೇ ಬಿಡೋಣ ಎಂದು ಎಂಥವರಾದರೂ ಧೈರ್ಯ ಮಾಡಿಬಿಡುತ್ತಾರೆ. ಅಂಥದ್ದರಲ್ಲಿ 2 ಲಕ್ಷ ರೂ.ಗೆ ಮರ್ಸಿಡೀಸ್ ಬೆಂಜ್ ಕಾರು ಸಿಗುತ್ತೆ ಎಂದರೆ ಬಿಡುವುದು ಉಂಟೆ?
ವಾಣಿಜ್ಯೋದ್ಯಮಿ ಖಲೀಲ್ ಶರೀಫ್ ಎಂಬುವರು ಸೆಕೆಂಡ್ ಹ್ಯಾಂಡ್ ಮರ್ಸಿಡೀಸ್ ಬೆಂಜ್ ಕಾರು ಖರೀದಿಸಲು ನಿರ್ಧರಿಸಿದರು. ಇಂಥ ಕಾರನ್ನು ಹುಡುಕಿಕೊಂಡ ಹೊರಟ ಅವರಿಗೆ ಜೀವನ್ ಭಿಮಾ ನಗರದ ಕಾರು ಗ್ಯಾರೇಜ್ ಒಂದರಲ್ಲಿ ಗ್ಯಾರೇಜ್ನ ಮಾಲೀಕನ ಸಂಬಂಧಿಯೊಬ್ಬನ ಪರಿಚಯವಾಗಿತ್ತು. ದಸ್ತಗೀರ್ ಎಂದು ತನ್ನನ್ನು ಪರಿಚಯಿಸಿಕೊಂಡ ಆತ 2 ರಿಂದ 2.25 ಲಕ್ಷ ರೂ.ಗೆಲ್ಲ ಕಾರು ಕೊಡಿಸುವುದಾಗಿ ನಂಬಿಸಿದ.
ಅದರ ಮರುದಿನವೇ 2006ರ ಮಾಡೆಲ್ ಕಾರು ಮಾರಾಟಕ್ಕಿದೆ. ಅದಕ್ಕೆ 2.25 ಲಕ್ಷ ರೂ. ಹೇಳುತ್ತಿದ್ದಾರೆ ಎಂದು ತಿಳಿಸಿದ. ಸಾಕಷ್ಟು ಹಗ್ಗಜಗ್ಗಾಟ ನಡೆಸಿದ ಬಳಿಕ 2 ಲಕ್ಷ ರೂ.ಗೆ ಕೊಡಿಸಲು ಒಪ್ಪಿಕೊಂಡ. ಅದರಂತೆ ತನ್ನ ಗೂಗಲ್ಪೇ ಖಾತೆ ಖಲೀಲ್ ಶರೀಫ್ ಅವರಿಂದ ಮುಂಗಡದ ರೂಪವಾಗಿ 78 ಸಾವಿರ ರೂ. ನಗದನ್ನು ವರ್ಗಾಯಿಸಿಕೊಂಡ.
ಇದನ್ನೂ ಓದಿ: ಹೃದಯಚಿಕಿತ್ಸೆಗೆ ಒಳಗಾಗಿದ್ದ ಅತ್ತೆಯ ಆರೈಕೆ ಮಾಡಿದ್ದಕ್ಕೆ ಪತಿ ಕೊಟ್ಟ ಬಳುವಳಿ ಕೇಳಿದರೆ ಶಾಕ್ ಆಗುತ್ತೀರ!
ಎರಡು ದಿನಗಳಲ್ಲಿ ಕಾರು ತಂದುಕೊಡುವುದಾಗಿ ಹೇಳಿದ ದಸ್ತಗೀರ್ ಬರಲೇ ಇಲ್ಲ. ಆತನ ಮೊಬೈಲ್ಫೋನ್ಗೆ ಕರೆ ಮಾಡಿದರೆ ಅದು ಸ್ವಿಚ್ಆಫ್ ಆಗಿರುವುದು ಗೊತ್ತಾಯಿತು. ಆದರೆ, ಅಷ್ಟರಲ್ಲೇ ಕೋವಿಡ್-19 ಲಾಕ್ಡೌನ್ ಜಾರಿಯಾಗಿದ್ದರಿಂದ, ಖಲೀಲ್ ಕೂಡ ಈ ಬಗ್ಗೆ ತಲೆಕಡಿಸಿಕೊಳ್ಳದೆ ಸುಮ್ಮನಾಗಿದ್ದರು.
ಲಾಕ್ಡೌನ್ ತೆರವಾಗಿ ಸಾಕಷ್ಟು ಸಮಯದ ಬಳಿಕ ದಸ್ತಗೀರ್ನನ್ನು ಹುಡುಕಿಕೊಂಡು ಆತ ಪರಿಚಯವಾಗಿದ್ದ ಜೀವನ್ ಭಿಮಾ ನಗರದ ಕಾರು ಗ್ಯಾರೇಜ್ಗೆ ತೆರಳಿದಾಗ ಖಲೀಲ್ ಅವರಿಗೆ ತಾವು ಮೋಸ ಹೋಗಿರುವ ವಿಷಯ ಗೊತ್ತಾಗಿದೆ.
ದಸ್ತಗೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋದಾಗ ಇದೇ ರೀತಿ ನಂಬಿಸಿ ಆತ ಇದುವರೆಗೂ 30 ಜನರನ್ನು ವಂಚಿಸಿರುವ ವಿಷಯ ಖಲೀಲ್ ಅವರಿಗೆ ಗೊತ್ತಾಗಿದೆ. ಆದರೂ ಅವರು, ಆತನ ವಿರುದ್ಧ ದೂರು ದಾಖಲಿಸಿ ಬಂದಿದ್ದಾರೆ.