ನ್ಯೂಸ್

ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸ್ಕೂಟರ್ ಸಮೇತ ಕೊಚ್ಚಿ ಹೋದ ವ್ಯಕ್ತಿ: ವಿಡಿಯೋ ವೈರಲ್​ | Floods

Floods: ಭಾರೀ ಮಳೆಯಿಂದ ಪ್ರವಾಹದಂತಾದ ರಸ್ತೆಯಲ್ಲಿ ಸ್ಕೂಟರ್​​ ಸವಾರನೊಬ್ಬ ಕೊಚ್ಚಿ ಹೋದ ಘಟನೆ ಗೋವಾದಲ್ಲಿ ನಡೆದಿದೆ.

ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗೋವಾದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಐಎಂಡಿ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಿತ್ತು. ನಿನ್ನೆಯಿಂದ ಭಾರೀ ಮಳೆಯಾಗುತ್ತಿರುವುದರಿಂದ ರಾಜ್ಯದ ಕೆಲವು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ನೀರು ತುಂಬಿದ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾನೆ. ನೀರಿನ ಹರಿವು ಎಷ್ಟು ವೇಗವಾಗಿದೆಯೆಂದರೆ ಆ ವ್ಯಕ್ತಿ ಪ್ರವಾಹದಲ್ಲಿ ಸ್ಕೂಟರ್​​ ಸಮೇತ ಕೊಚ್ಚಿ ಹೋಗಿದ್ದಾನೆ.

ಈ ಘಟನೆಗಳು ಅಧಿಕಾರಿಗಳ ಪೂರ್ವಸಿದ್ಧತೆಯಿಲ್ಲದಿರುವುದನ್ನು ಬಹಿರಂಗಪಡಿಸಿವೆ. ರಾಜ್ಯದಲ್ಲಿ ಮಾನ್ಸೂನ್ ಸಮೀಪಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ ಜನರು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪೂರ್ವ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ನೆಟ್ಟಿಗರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರೀ ಮಳೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. (ಏಜೆನ್ಸೀಸ್​)