ನ್ಯೂಸ್

ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!

ವಾಷಿಂಗ್ಟನ್​: ಅಪರಾಧವೇ ಮಾಡದವರಿಗೆ ಶಿಕ್ಷೆ ನೀಡುವುದು ದೊಡ್ಡ ಅಪರಾಧವೆನ್ನುತ್ತಾರೆ. ಅದೇ ರೀತಿ ಸರ್ಕಾರದ ತಪ್ಪಿನಿಂದಾಗಿ ಜೈಲು ವಾಸ ಅನುಭವಿಸಿದ ವ್ಯಕ್ತಿಯೊಬ್ಬ ಇದೀಗ ಕೋಟ್ಯಧಿಪತಿಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಚೆಸ್ಟರ್ ಹಾಲ್ಮನ್ ಎಂಬ ವ್ಯಕ್ತಿಯನ್ನು ಜೈಲಿಗೆ ಹಾಕಲಾಯಿತು. ಆದರೆ ಕೊಲೆ ನಡೆದ 28 ವರ್ಷಗಳ ನಂತರ ಕೊಲೆಯ ನಿಜಾಂಶ ಬಯಲಾಗಿದೆ. ಚೆಸ್ಟರ್​ ಅಪರಾಧಿಯಲ್ಲ ಎನ್ನುವುದು ಗೊತ್ತಾಗಿದೆ. ಸುಳ್ಳು ಸಾಕ್ಷಿ ಹೇಳಿಸಿ, ಆತನನ್ನು ಅಪರಾಧಿಯಾಗಿ ಮಾಡಿದ್ದಾಗಿ ದೃಢವಾಗಿದೆ.

2019ರಲ್ಲಿ ಚೆಸ್ಟರ್​ ನಿರಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು. ಆದರೆ ತನ್ನ ತಪ್ಪಿಲ್ಲದಿದ್ದರೂ 28 ವರ್ಷ ಜೈಲಿನಲ್ಲಿಟ್ಟ ಸರ್ಕಾರದ ಮೇಲೆ ಚೆಸ್ಟರ್​ ದೂರಿದ್ದರು. ಚೆಸ್ಟರ್​ ಪ್ರಕರಣದಲ್ಲಿ ಸರ್ಕಾರ ತಪ್ಪಾಗಿ ವಿಚಾರಣೆ ನಡೆಸಿದೆ ಎಂದು ದೂರಲಾಗಿದ್ದು, ಅದಕ್ಕಾಗಿ 71.6 ಕೋಟಿ ರೂಪಾಯಿ ಪರಿಹಾರ ಹಣವನ್ನು ಆತನಿಗೆ ನೀಡುವಂತೆ ಅಲ್ಲಿನ ಮೇಯರ್​ ಆದೇಶ ಹೊರಡಿಸಿದ್ದಾರೆ. ಜೈಲು ವಾಸ ಅನುಭವಿಸಿ ಬಂದ ಚೆಸ್ಟರ್​ ಇದೀಗ ಕೋಟಿಗಳ ಒಡೆಯನಾಗಿದ್ದಾನೆ. (ಏಜೆನ್ಸೀಸ್​)