ನ್ಯೂಸ್

ಕ್ವಾರಂಟೈನ್ ಕೇಂದ್ರದ ಬೆಡ್​ಶೀಟ್​ಗಳನ್ನೇ ಬಳಸಿಕೊಂಡು ಎಸ್ಕೇಪ್ ಆದ ವ್ಯಕ್ತಿ!

ಕ್ಯಾನ್ಬೆರಾ: ಬೇರೆ ರಾಜ್ಯದಿಂದ ಬಂದಿರುವ ವ್ಯಕ್ತಿಯೊಬ್ಬನಿಗೆ ಕ್ವಾರಂಟೈನ್ ಕೇಂದ್ರದಲ್ಲಿ ತಂಗಲು ಅವಕಾಶ ಮಾಡಿಕೊಟ್ಟಾಗ ಆತ ಅಲ್ಲಿನ ಬೆಡ್​ಶೀಟ್​ಗಳನ್ನೇ ಬಳಸಿಕೊಂಡು ಎಸ್ಕೇಪ್ ಆಗಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

39 ವರ್ಷದ ವ್ಯಕ್ತಿಯೊಬ್ಬ ಜುಲೈ 19ರಂದು ಬ್ರಿಸ್ಬೇನ್​ನಿಂದ ಪಶ್ಚಿಮ ಆಸ್ಟ್ರೇಲಿಯಾಕ್ಕೆ ವಿಮಾನದಲ್ಲಿ ಬಂದಿಳಿದಿದ್ದ. ಆದರೆ ಅಲ್ಲಿ ಕರೊನಾ ನಿಯಮಗಳಿದ್ದು, ಅದನ್ನು ಪರಿಶೀಲಿಸಿದಾಗ ಆತ ರಾಜ್ಯಕ್ಕೆ ಬರಲು ಅನರ್ಹ ಎನ್ನುವುದು ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ಆತನಿಗೆ 48 ಗಂಟೆಗಳೊಳಗೆ ಆತನ ರಾಜ್ಯಕ್ಕೆ ವಾಪಸು ತೆರಳುವಂತೆ ನಿರ್ದೇಶಿಸಲಾಗಿದ್ದು, ಒಂದು ದಿನದ ಮಟ್ಟಿಗೆ ತಂಗಲು ಕ್ವಾರಂಟೈನ್ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಕ್ವಾರಂಟೈನ್ ಕೇಂದ್ರದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂದು ಪ್ಲಾನ್ ಮಾಡಿದ ಆತ, ಅಲ್ಲಿದ್ದ ಬೆಡ್​ಶೀಟ್​ಗಳನ್ನು ಕಟ್ಟಿ ಅದನ್ನೇ ತಾನಿದ್ದ ನಾಲ್ಕನೇ ಮಹಡಿಯಿಂದ ಕೆಳಗೆ ಬಿಟ್ಟಿದ್ದಾನೆ. ಅದನ್ನು ಹಿಡಿದು ಕೆಳಗಿಳಿದು ಪರಾರಿಯಾಗಿದ್ದಾನೆ.

ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಎಚ್ಚರಗೊಂಡಿದ್ದು, ಆತನಿಗಾಗಿ ಬಲೆ ಬೀಸಿದ್ದಾರೆ. ಕ್ವಾರಂಟೈನ್ ಕೇಂದ್ರದ ಸನಿಹದಲ್ಲೇ ಆತ ಮತ್ತೆ ಸಿಕ್ಕಿಬಿದ್ದಿರುವುದಾಗಿ ಹೇಳಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)