ನ್ಯೂಸ್

ಒಂದು ಹನಿ ನೀರು ಕೆಳಗೆ ಚೆಲ್ಲದಂತೆ ಮೆಟ್ರೋ ಒಳಗೆ ಸ್ನಾನ ಮಾಡಿದ ಯುವಕ! ವಿಡಿಯೋ ವೈರಲ್​

ನ್ಯೂಯಾರ್ಕ್​: ಇತ್ತೀಚೆಗೆ ವಿಚಿತ್ರ ಪ್ರಕರಣಗಳಿಗೆ ಮೆಟ್ರೋ ರೈಲುಗಳು ಸಾಕ್ಷಿಯಾಗುತ್ತಿವೆ. ಪಂಜಾಬ್​ ಮೂಲದ ರಿಧಮ್​ ಚಾನನ ಎಂಬಾಕೆ ಇತ್ತೀಚೆಗೆ ಬ್ರಾ ಮತ್ತು ಮಿನಿ ಸ್ಕರ್ಟ್​ನಲ್ಲಿ ದೆಹಲಿಯ ಮೆಟ್ರೋ ರೈಲಿನ ಒಳಗೆ ಅಶ್ಲೀಲವಾಗಿ ಕಾಣಿಸಿಕೊಂಡಿದ್ದಳು. ಇದಾದ ಕೆಲವೇ ದಿನಗಳಲ್ಲಿ ಪ್ರೇಮಿಗಳಿಬ್ಬರು ಮೆಟ್ರೋ ರೈಲಿನ ಒಳಗೆ ಲಿಪ್​ಲಾಕ್​ ಮಾಡಿ, ಸರಸವಾಡಿದ್ದರು. ಇದೀಗ ಯುವಕನೊಬ್ಬನ ಕಾರಣದಿಂದ ಮೆಟ್ರೋ ಮತ್ತೆ ಸದ್ದು ಮಾಡುತ್ತಿದೆ.

ಯುವಕನೊಬ್ಬ ಮೆಟ್ರೋ  ರೈಲಿನಲ್ಲಿ ಅರೆಬೆತ್ತಲೆಯಾಗಿ ಸ್ನಾನ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಆಘಾತಕಾರಿ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ. ನ್ಯೂಯಾರ್ಕ್ ನಗರದಲ್ಲಿ. ನ್ಯೂಯಾರ್ಕ್​ನ ಮೆಟ್ರೋ ರೈಲಿನಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೋಚ್‌ನ ಕಂಪಾರ್ಟ್‌ಮೆಂಟ್‌ನಲ್ಲಿ ಯುವಕನೊಬ್ಬ ಎಲ್ಲ ಪ್ರಯಾಣಿಕರಂತೆ ಕುಳಿತಿದ್ದರು. ಇದ್ದಕ್ಕಿದ್ದಂತೆ ಮೇಲೆದ್ದ ಆತ ಆತನನ್ನು ಎಲ್ಲರೂ ನೋಡುತ್ತಿರುವಾಗಲೇ ಆತ ಶೂ ತೆಗೆಯುತ್ತಾನೆ. ಇದಾದ ಬಳಿಕ ತನ್ನ ಪ್ಯಾಂಟ್ ಅನ್ನು ಬಿಚ್ಚಿದನು. ನಂತರ ಮೇಲಿನ ಅಂಗಿಯನ್ನು ತೆಗೆದನು. ಬರೀ ಒಳಉಡುಪಿನಲ್ಲಿ ನಿಂತುಕೊಂಡನು. ಬಳಿಕ ಸೂಟ್‌ಕೇಸ್‌ನಂತಹ ಟ್ರಾಲಿ ಬ್ಯಾಗನ್ನು ತೆರೆದು, ಅದರ ಒಳಗೆ ನಿಂತು, ನೀರಿನ ಬಾಟಲಿ ತೆಗೆದುಕೊಂಡು ಸ್ನಾನ ಮಾಡಿದ್ದಾನೆ.

ಸಹ ಪ್ರಯಾಣಿಕರಿಗೆ ಶಾಕ್​

ಸಹಪ್ರಯಾಣಿಕರ ಮುಂದೆಯೇ ಸ್ನಾನ ಮಾಡಿದ ಬಳಿಕ ಟವೆಲ್​ನಿಂದ ಮೈ ಒರೆಸಿಕೊಂಡನು. ಒಂದು ಹನಿ ನೀರು ಕೂಡ ಹೊರಗೆ ಬರಲು ಬಿಡಲಿಲ್ಲ. ಸೂಟ್‌ಕೇಸ್‌ನಂತಹ ಟ್ರಾಲಿ ಬ್ಯಾಗ್‌ನಲ್ಲಿ ನೀರೆಲ್ಲ ಉಳಿಯಿತು. ಬಳಿಕ ಉಡುಪು ಧರಿಸಿಕೊಂಡು ರೈಲಿನಿಂದ ಹೊರ ಹೋದನು. ಆತನ ಕೃತ್ಯಕ್ಕೆ ಸಹ ಪ್ರಯಾಣಿಕರು ಬೆಚ್ಚಿಬಿದ್ದರು. ಏನಾಗುತ್ತಿದೆ ಎಂದು ಅರ್ಥವಾಗದೆ ಕೆಲವು ಆಘಾತದಲ್ಲಿಯೇ ಇದ್ದರು. ಕೆಲವರು ಅವನ ಭಯದಿಂದ ಅಲ್ಲಿಂದ ಎದ್ದು ಪಕ್ಕಕ್ಕೆ ಸರಿದರು. ಇತರ ಪ್ರಯಾಣಿಕರು ನಗುತ್ತಾ ಅಲ್ಲಿಯೇ ಉಳಿದರು.

ನೆಟ್ಟಿಗರ ಆಕ್ರೋಶ ಯುವಕ ಸ್ನಾನ ಮಾಡುತ್ತಿದ್ದಾಗ ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ಆ ಯುವಕನ ವರ್ತನೆಯನ್ನು ಖಂಡಿಸಿದ್ದಾರೆ. ಜನಪ್ರಿಯತೆ ಮತ್ತು ಪ್ರಚಾರಕ್ಕಾಗಿ ಹುಚ್ಚನಂತೆ ವರ್ತಿಸಿದ್ದಾನೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಅವನನ್ನು ಮೆಚ್ಚಿದ್ದಾರೆ. ಸಹಪ್ರಯಾಣಿಕರ ಮೇಲೆ ಒಂದು ಹನಿ ನೀರು ಕೂಡ ಬೀಳದಂತೆ ಅತ್ಯಂತ ಶಿಸ್ತಿನಿಂದ ಸ್ನಾನ ಮಾಡಿದ್ದಾನೆ ಎಂದಿದ್ದಾರೆ. (ಏಜೆನ್ಸೀಸ್​)