ನವದೆಹಲಿ: ಯಾವುದೇ ತಂದೆಯಾದರೂ ತನ್ನ ಮಗಳು ಮದುವೆಯಾಗುವ ಹುಡುಗನ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿರುತ್ತಾರೆ. ತಮ್ಮ ಮನೆಗೆ ಅಳಿಯನಾಗಿ ಬರುವ ಗಂಡು ಹೀಗಿರಬೇಕು ಎಂದು ಯೋಚಿಸಿಯೇ ಮಗಳ ಮದುವೆಯನ್ನು ನಿಶ್ಚಯಿಸುತ್ತಾರೆ. ಆದರೆ, ಇಲ್ಲೊಬ್ಬ ಭೂಪ ತನ್ನ ಅಪ್ರಾಪ್ತ ವಯಸ್ಕ ಮಗಳನ್ನು 5 ಲಕ್ಷ ರೂಪಾಯಿ ಆಸೆಗೆ ವೃದ್ಧನೊಬ್ಬನಿಗೆ ಕೊಟ್ಟು ಮದುವೆ ಮಾಡಲು ಮುಂದಾಗಿದ್ದು, ಬಳಿಕ ಮದುವೆ ಮನೆಯಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.
ಘಟನೆಯು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದ್ದು, ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮದುವೆಯನ್ನು ನಿಲ್ಲಿಸಿ ವರ ಹಬೀಬ್ ಖಾನ್ (72)ನನ್ನು ವಶಕ್ಕೆ ಪಡೆದಿದ್ದಾರೆ. ದುಡ್ಡಿನ ಆಸೆಗೆ ಮಗಳನ್ನು ಮಾರಾಟ ಮಾಡಲು ಯತ್ನಿಸಿದ ತಂದೆ ಆಲಂ ಸೈಯದ್ ಪರಾರಿಯಾಗಿದ್ದು, ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಬಳಿಕ ಮೈಮೇಲಿದ್ದ ಚಿನ್ನಾಭರಣ ದೋಚಿದ್ದ ಖದೀಮರು; ತನಿಖೆಯಲ್ಲಿ ಹೊರಬಿತ್ತು ಅಸಲಿ ಕಹಾನಿ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಾಲಕಿಯ ತಂದೆ ಆಲಂ ಸೈಯದ್ ಐದು ಲಕ್ಷ ರೂ. ಹಣಕ್ಕೆ ತನ್ನ ಮಗಳನ್ನು ಹಬೀಬ್ ಖಾನ್ಗೆ ಮದುವೆ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ. ಬಳಿಕ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಕೂಡಲೇ ಮಧ್ಯಪ್ರವೇಶಿಸಿ ವರ ಹಬೀಬ್ ಖಾನ್ ಹಾಗೂ ಮದುವೆ ನಡೆಸಿಕೊಡಲು ಬಂದಿದ್ದ ನಿಕಾಹ್ ಖ್ವಾನ್ನನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಬರುತ್ತಿದ್ದಂತೆ ಬಾಲಕಿಯ ತಂದೆ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.